ಪ್ರಕೃತಿ ಬೆಳಗಾವಿ

*ಸಂವಿಧಾನವು ಭಾರತದ ವೈವಿಧ್ಯತೆಯನ್ನು ಬೆಸೆಯುವ ಶಕ್ತಿ: ಡಾ. ನರೇಂದ್ರ ಜಾಧವ್*

“ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಡಾ. ಅಂಬೇಡ್ಕರ್” ಕುರಿತು ಸಂಪಾದಿತ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ನರೇಂದ್ರ ಜಾಧವ್ ಅಭಿಮತ

ಭಾರತೀಯ ಪ್ರಜಾಪ್ರಭುತ್ವಕ್ಕೆ ಸ್ಪಷ್ಟ ರೂಪ ಹಾಗೂ ಭದ್ರ ಬುನಾದಿಯನ್ನು ನೀಡಿದವರು ಡಾ. ಬಿ.ಆರ್. ಅಂಬೇಡ್ಕರ್. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಕೇವಲ ಆದರ್ಶಗಳಾಗಿ ಉಳಿಯದೆ, ಪ್ರತಿಯೊಬ್ಬ ನಾಗರಿಕನ ಹಕ್ಕುಗಳಾಗಿ ರೂಪುಗೊಳ್ಳುವಂತೆ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಡಾ. ನರೇಂದ್ರ ಜಾಧವ್ ಅಭಿಪ್ರಾಯಪಟ್ಟರು.

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಕನ್ನಡ ಭವನದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ವತಿಯಿಂದ ಗುರುವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಅಧ್ಯಯನ ಪೀಠದಿಂದ ಸಂಪಾದನೆಗೊಂಡ ‘ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಡಾ. ಅಂಬೇಡ್ಕರ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಭಾರತೀಯ ಸಂವಿಧಾನದ 77 ವರ್ಷಗಳು: ಹಿನ್ನೋಟ ಮತ್ತು ಮುನ್ನೋಟ’ ವಿಷಯದ ಕುರಿತು ಮಾತನಾಡಿದ ಅವರು, ಇಂದಿನ ಯುವಜನತೆ ಸಮಾಜದಲ್ಲಿನ ಅಸಮಾನತೆಗಳನ್ನು ಅರಿತುಕೊಂಡು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಹತ್ವವನ್ನು ತಿಳಿದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸ್ಫೂರ್ತಿಯ ಸೆಲೆಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಮಾರ್ಗದರ್ಶನ ನೀಡುತ್ತಿವೆ. ಧರ್ಮ, ಜಾತಿ, ಭಾಷೆ ಹಾಗೂ ಪಂಥಗಳ ವೈವಿಧ್ಯತೆಯ ನಡುವೆಯೂ ಸುಮಾರು 144 ಕೋಟಿ ಭಾರತೀಯರನ್ನು ಒಂದೇ ರಾಷ್ಟ್ರೀಯ ಚೌಕಟ್ಟಿನಡಿ ಬೆಸೆಯುವಲ್ಲಿ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ.

ಶಾಲಾ-ಕಾಲೇಜುಗಳಲ್ಲಿ ಪೌರನೀತಿ ಮತ್ತು ಸಂವಿಧಾನವನ್ನು ಪ್ರಮುಖ ವಿಷಯವಾಗಿ ಬೋಧಿಸುವ ಅಗತ್ಯವಿದೆ. ಸಂವಿಧಾನದ ಶಿಕ್ಷಣವೆಂದರೆ ಕೇವಲ ಕಾನೂನು ಮತ್ತು ವಿಧಿಗಳನ್ನು ಕಂಠಪಾಠ ಮಾಡುವುದಲ್ಲ; ಪ್ರಜಾಪ್ರಭುತ್ವದ ಮೌಲ್ಯಗಳು, ಸಹಬಾಳ್ವೆ, ಸಮಾನತೆ ಹಾಗೂ ನಾಗರಿಕ ಜವಾಬ್ದಾರಿಗಳನ್ನು ಯುವಜನರಲ್ಲಿ ಬೆಳೆಸುವುದಾಗಿದೆ ಎಂದರು.

ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ರಾಜಕೀಯ ವಿಶ್ಲೇಷಕ ಡಾ. ಅಜಯ್ ಗುಡವರ್ತಿ ಮಾತನಾಡಿ, ಭಾರತೀಯ ಸಂವಿಧಾನವು ಸಾಮಾಜಿಕ ಕ್ರಾಂತಿಯ ಆಶಯಗಳಿಂದ ಪ್ರೇರಿತವಾಗಿದೆ. ಸಾಮಾಜಿಕ ಸಬಲೀಕರಣದ ಜೊತೆಗೆ ಸಮಾಜದ ಎಲ್ಲ ವರ್ಗಗಳ ನಡುವೆ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ. ಸಮುದಾಯಗಳ ನಡುವೆ ನೈಜ ಭ್ರಾತೃತ್ವ ನಿರ್ಮಾಣವಾದಾಗ ಮಾತ್ರ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದರು.

ಕುಲಸಚಿವ ಶ್ರವಣ ನಾಯ್ಕ ಅವರು ಭಾರತೀಯ ಸಂವಿಧಾನವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿದ್ದು, ಪ್ರತಿಯೊಬ್ಬ ನಾಗರಿಕನ ಹಕ್ಕು, ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುವ ಮಹತ್ತರ ಹೊಣೆಗಾರಿಕೆಯನ್ನು ಹೊಂದಿದೆ. ಸಂವಿಧಾನದ ಆಶಯಗಳು ಪುಸ್ತಕದ ಪುಟಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಮಾತನಾಡಿ, ನಮ್ಮ ಸಂವಿಧಾನ ಕಾಲದ ಪರೀಕ್ಷೆಯನ್ನು ಗೆದ್ದು, ಏಳು ದಶಕಗಳನ್ನು ದಾಟಿ ಬಂದಿದೆ. ಈ ಸುದೀರ್ಘ ಪಯಣದಲ್ಲಿಯೂ ತನ್ನ ಆಶಯ, ಮೌಲ್ಯ ಮತ್ತು ಪ್ರಸ್ತುತತೆಯನ್ನು ಅಚಲವಾಗಿ ಉಳಿಸಿಕೊಂಡಿದೆ. ಕಾಲಘಟ್ಟದ ಬದಲಾವಣೆಗಳಿಗೆ ಅನುಗುಣವಾಗಿ ಹೊಸ ಸವಾಲುಗಳಿಗೆ ಸ್ಪಂದಿಸುತ್ತಾ ವಿಕಸನಗೊಳ್ಳುತ್ತಿರುವ ಈ ಸಂವಿಧಾನವು ಕೇವಲ ಆಡಳಿತಾತ್ಮಕ ಮಾರ್ಗಸೂಚಿಯಲ್ಲ. ಅದು ಪ್ರಜಾಪ್ರಭುತ್ವದ ಜೀವಂತ ಶಕ್ತಿ. ಯುವ ಪೀಳಿಗೆಯಲ್ಲಿ ಹಕ್ಕುಗಳ ಅರಿವು, ಕರ್ತವ್ಯ ಪ್ರಜ್ಞೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತಿದೆ. ಸಮಾಜದಲ್ಲಿ ಸಮಾನತೆಯನ್ನು ಗಟ್ಟಿಗೊಳಿಸುತ್ತ, ಸಮಾನತೆಯ ಭವಿಷ್ಯ ನಿರ್ಮಾಣಕ್ಕೆ ಸದಾ ದಾರಿದೀಪವಾಗಿದೆ ಎಂದರು.

ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ರಾಜಕೀಯ ವಿಶ್ಲೇಷಕ ಡಾ. ಅಜಯ್ ಗುಡವರ್ತಿ ಮಾತನಾಡಿ, ಭಾರತೀಯ ಸಂವಿಧಾನವು ಸಾಮಾಜಿಕ ಕ್ರಾಂತಿಯ ಆಶಯಗಳಿಂದ ಪ್ರೇರಿತವಾಗಿದೆ. ಸಾಮಾಜಿಕ ಸಬಲೀಕರಣದ ಜೊತೆಗೆ ಸಮಾಜದ ಎಲ್ಲ ವರ್ಗಗಳ ನಡುವೆ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ. ಸಮುದಾಯಗಳ ನಡುವೆ ನೈಜ ಭ್ರಾತೃತ್ವ ನಿರ್ಮಾಣವಾದಾಗ ಮಾತ್ರ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದರು.

ಬೆಳಗಾವಿಯ ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಕರ್ತ ದಿಲೀಪ್ ಕಾಮತ್ ಅವರು ‘ಅಂಬೇಡ್ಕರ್ ಅವರ ಸಂವಿಧಾನವಾದ: ಸಾಂವಿಧಾನಿಕ ನೈತಿಕತೆ, ಹಕ್ಕುಗಳು ಮತ್ತು ಇಂದಿನ ಸಾಮಾಜಿಕ ನ್ಯಾಯ’ ವಿಷಯದ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮವಾದ ‘ಮಹೀಂದ್ರಾ ಪ್ರೈಡ್ ಕ್ಲಾಸ್‌ರೂಮ್’ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ನಾಂದಿ ಫೌಂಡೇಶನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎನ್. ಪಾಟೀಲ, ಹಣಕಾಸು ಅಧಿಕಾರಿ ಪ್ರೊ. ಬಿ.ಎಸ್. ನಾವಿ, ಉಪಸ್ಥಿತರಿದ್ದರು . ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಂಯೋಜಕ ಪ್ರೊ. ಅಶೋಕ್ ಎ. ಡಿಸೋಜಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಸಂಘಟನಾ ಕಾರ್ಯದರ್ಶಿಗಳಾದ ಡಾ. ಅಶ್ವಿನಿ ಎಂ. ಜಾಮೂನಿ ವಂದಿಸಿದರು .

ಸಂಘಟನಾ ಕಾರ್ಯದರ್ಶಿ ಡಾ. ಕಿರಣ್ ಕುಮಾರ್ ಪಿ., ಡಾ. ಮಹೇಶ್ ಕುಮಾರ್ ಎನ್., ಡಾ. ಸಂಜಯ ಕಾಂಬಳೆ, ಡಾ. ಮಹಾಂತೇಶ ಕುರಿ, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.*************************

Leave a Reply

Your email address will not be published. Required fields are marked *

Back to top button