ಪ್ರಕೃತಿ ಬೆಳಗಾವಿ

*ಗಡಿಭಾಗದಲ್ಲಿ ಕನ್ನಡ ನಾಡು ಕಟ್ಟುವಲ್ಲಿ ಸಾರಿಗೆ ಇಲಾಖೆಯ ಪಾತ್ರ ಮಹತ್ವದ್ದು: ಸುನೀಲ ಹಣಮನ್ನವರ*

*ಬೆಳಗಾವಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಸಮಾರಂಭ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗಡಿಭಾಗದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಾರಿಗೆ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ. ಕನ್ನಡ ಭಾಷೆಯ ಪ್ರಚಾರ, ಕನ್ನಡಿಗರ ಒಗ್ಗಟ್ಟು ಹಾಗೂ ಜನಸಾಮಾನ್ಯರಲ್ಲಿ ಕನ್ನಡಾಭಿಮಾನ ಮೂಡಿಸುವ ಕಾರ್ಯದಲ್ಲಿ ಸಾರಿಗೆ ಸಂಸ್ಥೆಯ ಸೇವೆ ಶ್ಲಾಘನೀಯವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹಣಮನ್ನವರ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗ ಹಾಗೂ ಕನ್ನಡ ಕ್ರಿಯಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಡಿನಾಡಿನ ಜನರಿಗೆ ಸಾರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ಕನ್ನಡದ ಸಾಂಸ್ಕೃತಿಕ ಮೌಲ್ಯಗಳನ್ನು ಜನಮನಕ್ಕೆ ತಲುಪಿಸುವ ಮೂಲಕ ಸಾರಿಗೆ ಇಲಾಖೆ ಕನ್ನಡ ನಾಡು ಕಟ್ಟುವ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ಕನ್ನಡ ಕ್ರಿಯಾ ಸಮಿತಿಯು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಈ ನಿಟ್ಟಿನಲ್ಲಿ ನಿರಂತರವಾಗಿ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಆಶಿಸಿದರು.

ರಾಜ್ಯೋತ್ಸವದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ವತಿಯಿಂದ ಸಿದ್ಧಪಡಿಸಲಾಗುವ ಸ್ತಬ್ಧಚಿತ್ರಗಳು ಜನಮನ್ನಣೆ ಗಳಿಸುತ್ತಿದ್ದು, ಅವುಗಳ ಯಶಸ್ಸಿನ ಹಿಂದೆ ಕಾರ್ಮಿಕರ ಕೌಶಲ್ಯ, ಪರಿಶ್ರಮ ಹಾಗೂ ಕಾರ್ಯವೈಖರಿ ಪ್ರಮುಖ ಪಾತ್ರ ವಹಿಸಿದೆ. ಕಾರ್ಮಿಕರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕನ್ನಡದ ಕಹಳೆಯನ್ನು ಗಡಿಭಾಗದಲ್ಲಿ ಮೊಳಗಿಸುವಲ್ಲಿ ಸಾರಿಗೆ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ. ರಾಜ್ಯದಲ್ಲಿ ಕನ್ನಡವನ್ನು ಅತ್ಯಧಿಕವಾಗಿ ಬಳಸುವ ಇಲಾಖೆಗಳ ಪೈಕಿ ಸಾರಿಗೆ ಇಲಾಖೆ ಪ್ರಮುಖವಾಗಿದೆ ಎಂದರು.

ಬೆಳಗಾವಿ ವಿಭಾಗವು ನಿರಂತರವಾಗಿ 34ನೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗಿದೆ. ಸಂಸ್ಥೆಯು ಇನ್ನಷ್ಟು ಪ್ರಗತಿ ಸಾಧಿಸಲಿ ಹಾಗೂ ಮುಂದಿನ ವರ್ಷ ಕಾರ್ಯಕ್ರಮವನ್ನು ಇನ್ನಷ್ಟು ಅದ್ದೂರಿಯಾಗಿ ಆಯೋಜಿಸಲಿ ಎಂದು ಸುನೀಲ ಹಣಮನ್ನವರ ಹಾರೈಸಿದರು.

ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ (ಸಿಪಿಐ) ಜೆ.ಎಂ. ಕಾಲಿಮಿರ್ಚಿ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತ ಕಾಪಾಡುವ ಜವಾಬ್ದಾರಿ ಸಾರಿಗೆ ಸಿಬ್ಬಂದಿಯ ಮೇಲಿದೆ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ವಿಶೇಷವಾಗಿ ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರು ಜಾಗರೂಕತೆಯಿಂದ ಸಂಚರಿಸಿ, ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಎಲ್ಲರೂ ಪರಸ್ಪರ ಸಹಕಾರ ಮತ್ತು ಶಿಸ್ತಿನಿಂದ ನಡೆದುಕೊಂಡಾಗ ಮಾತ್ರ ಸಾರ್ವಜನಿಕ ಸುರಕ್ಷತೆ ಹಾಗೂ ಸಮಾಜದ ಹಿತವನ್ನು ಕಾಪಾಡಲು ಸಾಧ್ಯ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ್ ಬಿ.ಎಂ. ಮಾತನಾಡಿ, ಕನ್ನಡ ಕ್ರಿಯಾ ಸಮಿತಿಯ ಕನ್ನಡಾಭಿಮಾನ ಹಾಗೂ ಕನ್ನಡ ಭಾಷೆಯ ಮೇಲಿನ ಪ್ರೀತಿ ಮೆಚ್ಚುವಂತದ್ದು. ಗಡಿಭಾಗದಲ್ಲಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಇಷ್ಟೊಂದು ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಸಮಿತಿ ಕೈಗೊಂಡಿರುವ ಕಾರ್ಯಗಳಿಗೆ ಇನ್ನಷ್ಟು ಬಲ ದೊರೆಯಲಿ. ಕನ್ನಡಾಭಿಮಾನವನ್ನು ಜನಮನದಲ್ಲಿ ಬಿತ್ತುವ ಈ ಪ್ರಯತ್ನ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.

ಕನ್ನಡ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಸುರೇಶ ವೆಂಕಪ್ಪ ಯರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡು, ನುಡಿ ಹಾಗೂ ಜಲದ ಸಂರಕ್ಷಣೆಗೆ ಸಾರಿಗೆ ಸಂಸ್ಥೆಯ ಕಾರ್ಮಿಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸುವ ಮೂಲಕ ಬೆಳಗಾವಿ ಸಾರಿಗೆ ವಿಭಾಗ ರಾಜ್ಯಮಟ್ಟದಲ್ಲಿ ಹೆಗ್ಗಳಿಕೆ ಪಡೆದಿದೆ. ಗಡಿಭಾಗದ ಗ್ರಾಮಗಳಿಗೆ ಪ್ರತಿದಿನ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುವುದರಿಂದ ಕನ್ನಡದ ಕಹಳೆ ನಿರಂತರವಾಗಿ ಮೊಳಗುತ್ತಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಕನ್ನಡವೇ ನಮ್ಮ ಉಸಿರು, ನಮ್ಮ ತಾಯ್ನಾಡಿನ ಗೌರವಕ್ಕಾಗಿ ಹಗಲಿರುಳು ದುಡಿಯೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಪ್ರಕಾಶ ನಾಯ್ಕ, ನಿತಿನ್‌ ಗಡದೆ, ದಶರಥ ಕೆಳಗೇರಿ, ಸಂಜಯ ಮಾಸುಮಳಿ, ಅರುಣಕುಮಾರ ಮಾಡೊಳ್ಳಿ, ದಿನೇಶ ಸಿರಸಾಟ, ಪ್ರದಾನ ಕಾರ್ಯದರ್ಶಿ ಗೋಪಾಲ ಲಮಾಣಿ, ಶಶಿಕಾಂತ ಬಡಿಗೇರ್ , ಗಿರೀಶ್ ಕಾಂಬಳೆ, ಉಮೇಶ್ , ಪ್ರಕಾಶ್ ಸಿದ್ನಾಳ, ಪ್ರವೀಣ್ ಬಿರಾದಾರ್ , ವೆಂಕಟೇಶ್ ಲಮಾಣಿ, ತಮ್ಮಣ್ಣ ಗಾಣ್ಗೇರ್, ಮಾರುತಿ ಕಮ್ಮಾರ ಹಾಗೂ ಇತರರು ಇದ್ದರು.******************************

Leave a Reply

Your email address will not be published. Required fields are marked *

Back to top button