ಪ್ರಕೃತಿ ಬೆಳಗಾವಿ

*ಸಾಮಾಜಿಕ ಜಾಲತಾಣಗಳ ಮೌಢ್ಯಕ್ಕೆ ಒಳಗಾಗದೆ ಸಾಧನೆಯತ್ತ ಗಮನಹರಿಸಿ: ಶೀಬಾ ಎನ್.*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದೆ, ಜೆನ್ ಝೀ ಯುವಜನತೆ ಜೀವನದ ಗುರಿ ಹಾಗೂ ಸಾಧನೆಯತ್ತ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು, ಅವರ ಚಟುವಟಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಎಲ್.ಎಸ್.ಎ. ಹೈಸ್ಕೂಲ್ ಪ್ರಾಂಶುಪಾಲೆ ಶೀಬಾ ಎನ್. ಹೇಳಿದರು.

ನಗರದ ಶ್ರೀನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿಯಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ವತಿಯಿಂದ ಆಯೋಜಿಸಿದ್ದ ‘ನೆಕ್ಸ್ಟ್ ಜೆನ್ ನಾರಿ ಶಕ್ತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೀವನದಲ್ಲಿ ಸೋಲು ಸಹಜ. ಅದನ್ನು ಧೈರ್ಯದಿಂದ ಎದುರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ಪಾಲಕರು ಜಾಗೃತರಾಗಿರಬೇಕು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಅವರ ಭವಿಷ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ವಾಗ್ಮಿ ಎನ್.ಆರ್. ದಾಮೋದರ ಶರ್ಮಾ ಮಾತನಾಡಿ, ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗದೆ ದೇಶದ ಆಚಾರ-ವಿಚಾರ, ಭಾಷೆ ಹಾಗೂ ಸಂಪ್ರದಾಯಗಳನ್ನು ಗೌರವಿಸಬೇಕು. ವಯೋಸಹಜ ಆಮಿಷಗಳಿಗೆ ಬಲಿಯಾಗದೆ ತಮ್ಮ ಗುರಿ ಮತ್ತು ಸಾಧನೆಯತ್ತ ಗಮನಹರಿಸಬೇಕು. ಪಾಲಕರ ತ್ಯಾಗವನ್ನು ಮಕ್ಕಳು ಎಂದಿಗೂ ಮರೆಯಬಾರದು. ದೇಶದ ಇತಿಹಾಸ ಹಾಗೂ ಕೊಡುಗೆಗಳ ಬಗ್ಗೆ ಜ್ಞಾನ ಹೊಂದಿ, ಜಾತಿ-ಭೇದಗಳನ್ನು ಬದಿಗಿಟ್ಟು ಭಾರತಮಾತೆಯ ಹೆಮ್ಮೆಯ ಮಕ್ಕಳಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದಿಶಾ ಭಾರತದ ಕಾರ್ಯಕರ್ತೆ ಜಯಶ್ರೀ ಅವರು ವಿದ್ಯಾರ್ಥಿನಿಯರಿಗೆ ಪ್ರೇರಣಾದಾಯಕ ವಿಡಿಯೊಗಳನ್ನು ಪ್ರದರ್ಶಿಸಿ, ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮ ಮಹಿಳಾ ಬ್ಯಾಂಕ್ ಅಧ್ಯಕ್ಷೆ ರಾಜೇಶ್ವರಿ ಎಂ. ಕವಟಗಿಮಠ, ವಿಜಯಾ ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್ ನಿರ್ದೇಶಕಿ ಸುನೀತಾ ಪಾಟೀಲ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಗೋವರ್ಧನ ರಾವ್, ಶ್ರೀಕಾಂತ ಕದಮ್, ಆರ್‌ಎಸ್‌ಎಸ್ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಕೃಷ್ಣಾನಂದ ಕಾಮತ್, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಸುನೀತಾ ತಿಮ್ಮನಗೌಡರ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅಶ್ವಿನಿ ಅಂಗಡಿ ಉಪಸ್ಥಿತರಿದ್ದರು.

ಮಾತೃಶಕ್ತಿ ಪ್ರಮುಖರಾದ ಡಾ. ಅಶ್ವಿನಿ ಭಾಗೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಮಿತಾ ತಿಗಡಿ ನಿರೂಪಿಸಿದರು. ಸ್ಪೂರ್ತಿ ಕೋಂಕಣಿ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು. ಶ್ವೇತಾ ಮಾಳಕ್ಕನವರ ವಂದಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಂಘಗಳ ಸದಸ್ಯರನ್ನು ಸತ್ಕರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜೆನ್ ಝೀ ವಿದ್ಯಾರ್ಥಿನಿಯರು ಹಾಗೂ ತಾಯಂದಿರು ಪಾಲ್ಗೊಂಡಿದ್ದರು.******************************

Leave a Reply

Your email address will not be published. Required fields are marked *

Back to top button