ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ; ದಾಖಲೆಗಳ ಸಮರ್ಪಕ ನಿರ್ವಹಣೆಗೆ ಸಚಿವ ಸತೀಶ ಜಾರಕಿಹೊಳಿ ಸೂಚನೆ…!!

2025-26 ನೇ ಸಾಲಿನ (ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ನ.29 : ಶಾಸಕರ, ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವುದರ ಜೊತೆಗೆ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸೂಚಿಸಿದರು.
ಸುವರ್ಣವಿಧಾನ ಸೌಧದಲ್ಲಿ ಶನಿವಾರ (ನ.29) ಜರುಗಿದ ತ್ರೈಮಾಸಿಕ ಕೆ.ಡಿ.ಪಿ.ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿಯ ಸಭೆಯಲ್ಲಿ ನಿರ್ಣಯಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೆಲ ಮುಖ್ಯ ಇಲಾಖೆಗಳನ್ನು ಹಂಚಿಕೆ ಮಾಡಿ ಆ ಇಲಾಖೆಗಳ ಕುರಿತು ವಿಸ್ತ್ರತವಾಗಿ ಪ್ರಗತಿ ಪರೀಶಿಲಿಸಲಾಗುತ್ತಿದೆ. ಇದರಿಂದಾಗಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಹಂತದಲ್ಲಿಜರುಗಿಸುವ ಸಭೆಯ ಹಾಗೂ ಸಭೆಯ ಅನುಪಾಲನಾ ವರದಿಯನ್ನು ಜನಪ್ರತಿನಿಧಿಗಳಿಗೆ ಒದಗಿಸಲು ಅವರುಗಳನ್ನು ಸಭೆಗೆ ಸಾಕಷ್ಟು ಮುಂಚಿತವಾಗಿ ಸಭೆಯ ಮಾಹಿತಿ ನೀಡಲು ಸೂಚಿಸಿದರು.
ಈ ಸಭೆಗಳಿಗೆ ಜನಪ್ರತಿನಿಧಿಗಳಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ಒದಗಿಸಲು ಸೂಚಿಸಿದರು.
ಬೆಳಗಾವಿ ನಗರ ವ್ಯಾಪ್ತಿಯು ತುಂಬಾ ವಿಶಾಲವಾಗಿದ್ದು ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಎರಡು ಹೊಸ ಗಹನ ತ್ಯಾಜ್ಯ ವಿಲೆವಾರಿ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲು ತಿಳಿಸಿದರು. ಹೊಸ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ತಿಳಿಸಿದರು.
ಜಿಲ್ಲೆಯಲ್ಲಿ ಡಿ.ಜೆ.ನಿಷೇಧ ಕುರಿತು ಚರ್ಚೆಗೆ ಸ್ಪಂದಿಸಿದ ಸಚಿವರು ನ್ಯಾಯಾಲಯದ ಆದೇಶದಂತೆ ಡಿ.ಜೆ. ನಿಷೇಧ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಸಭೆಯನ್ನು ಜರುಗಿಸಿ ನಿರ್ಣಯಿಸಲು ತಿಳಿಸಿದ ಸಚಿವರಾದ ಸತೀಶ ಜಾರಕಿಹೊಳಿ ಅವರು ಹಿಂದುಳಿದ ವರ್ಗದ ಸಮೀಕ್ಷಾ ಕಾರ್ಯವನ್ನು ಕಡಿಮೆ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಅಭಿನಂದಿಸಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ರಾಜು ಕಾಗೆ ಅವರು ಮಾತನಾಡಿ ಸವಳು ಜವಳು ಭೂಮಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಅನುದಾನದೊಂದಿಗೆ ಹೆಚ್ಚುವರಿ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಹನಿ ನೀರಾವರಿ ಯೋಜನೆಗಳಿಗೆ ಒದಗಿಸಲಾಗುವ ಸಬ್ಸಿಡಿ ಮೊತ್ತವನ್ನು ಅರ್ಹ ಎಲ್ಲ ರೈತರಿಗೆ ಒದಗಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ತಾಲೂಕುಗಳಿಗೆ ಹೊಸ ಬಸ್ ಒದಗಿಸುವಂತೆ ಮನವಿ ಮಾಡಿದ ಶಾಸಕರಿಗೆ ಸ್ಪಂಧಿಸಿದ ನಿಗಮದ ಅಧ್ಯಕ್ಷರು ಈಗಾಗಲೇ 300 ಹೊಸ ಬಸ್ಸ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಖರೀದಿಸಿ ರಾಜ್ಯದಲ್ಲಿ ಅಗತ್ಯಕ್ಕನುಗುಣವಾಗಿ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭರ್ತಿ ಮಾಡಲಾಗುವ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಹನಿ ನೀರಾವರಿ ಯೋಜನೆಯಡಿ ನಿಗದಿಪಡಿಸಲಾದ ಗುರಿಯನ್ನು ಪೂರ್ಣಗೊಳಿಸಬೇಕು. ಹೆಸರು ಹಾಗೂ ಉದ್ದು ಖರೀದಿ ಕೇಂದ್ರಗಳು ಸಮರ್ಪಕ ನಿರ್ವಹಿಸದೆ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ತಿಳಿಸಿದರು. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಹು ದಿನಗಳಿಂದ ಕಾಮಗಾರಿಗಳನ್ನು ಕೈಗೊಳ್ಳದೆ ಇರುವಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಮಾತನಾಡಿ ಶಾಸಕರ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಬಂದಂತಹ ಅನುದಾನ ವರ್ಷಾಂತ್ಯಕ್ಕೆ ವ್ಯಪಗತ ಆಗದಂತೆ ಸಮರ್ಪಕವಾಗಿ ಬಳಕೆ ಆಗಬೇಕು. ಕಳೆದ ಸಭೆಯ ಅನುಪಾಲನಾ ವರದಿಯನ್ನು ಎಲ್ಲ ಜನ ಪ್ರತಿನಿಧಿಗಳಿಗೆ ಸಾಕಷ್ಟು ಮುಂಚಿತಾವಗಿ ಒದಗಿಸಬೇಕು ಎಂದರು. ಕಂದಾಯ ಗ್ರಾಮ ಹೊರತುಪಡಿಸಿ ಜನವಸತಿ ಪ್ರದೇಶಗಳಿಗೂ ನಿರಂತರ ಜ್ಯೋತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಯಡಿ ಕಾಮಗಾರಿ ಪ್ರಾರಂಭಗೊಂಡು ಅರ್ಧಕ್ಕೆ ನಿಂತಿರುವ ಮನೆಗಳಿಗೆ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ನೂರು ಹಾಸಿಗೆಗಳ ಇ.ಎಸ್.ಆಯ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದರು ಸಹ ಇದುವರೆಗೆ ಕಟ್ಟಡ ನಿರ್ಮಾಣ ಆಗಿರುವುದಿಲ್ಲ. ಈ ಬಾರಿ ಕಟ್ಟಡ ನಿರ್ಮಾಣ ಆಗದೇ ಇದ್ದಲ್ಲಿ ಅನುದಾನ ಮರಳಿ ಹೋಗುವುದು ಎಂದರು. ಉದ್ದು, ಹೆಸರು ಹಾಗೂ ಸೋಯಾಬಿನ್ ಖರೀದಿ ಕೇಂದ್ರಗಳನ್ನು ಮುಂಚಿತವಾಗಿ ತೆರೆಯಲು ಕ್ರಮವಹಿಸಬೇಕು. ನಗರ ನೀರು ಸರಬರಾಜು ಇಲಾಖೆಯಡಿ ಸಿಬ್ಬಂದಿಗಳ ಕೊರತೆ ಇರುತ್ತದೆ. ಇಲಾಖೆಯ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿ ಎಲ್ಲ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಲು ತಿಳಿಸಿದರು.
ಶಾಸಕರಾದ ರಾಜು (ಆಸೀಫ್) ಸೇಠ ಅವರು ಮಾತನಾಡಿ ನಗರದಲ್ಲಿನ ಸೂಪರ ಸ್ಪೆಶಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಮತ್ತೋಂದು ಎಂ.ಆರ್.ಆಯ್. ಸ್ಕ್ಯಾನಿಂಗ್ ಮಶಿನಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಶಾಸಕರಾದ ಧುರ್ಯೋಧನ ಐಹೊಳೆ ಅವರು ಮಾತನಾಡಿ ಬಿರನಾಳ ಗ್ರಾಮದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಮಾಡುತ್ತಿರುವ ದೂರುಗಳು ಬರುತ್ತಿದ್ದು ಅರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದುಗೊಳಿಸಬಾರದು. ರಾಯಬಾಗದಲ್ಲಿನ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸಲು ಕ್ರಮಕೈಗೊಳ್ಳುವಂತೆ ತಿಳಿಸದರು.
ಶಾಸಕರಾದ ಗಣೇಶ ಹುಕ್ಕೇರಿ ಅವರು ಮಾತನಾಡಿ ಕೃಷಿಹೊಂಡಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಗಟ್ಟಲು ಎಲ್ಲ ಕೃಷಿ ಹೊಂಡಗಳಿಗೆ ತಂತಿಬೇಲಿ ಅಳವಡಿಸಲು ಕ್ರಮಜರಿಗಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವ ಮಾತನಾಡಿ ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲು ಕ್ರಮವಹಿಸಲು ಒತ್ತಾಯಿಸಿದರು. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರ ನಿಧಿಯಡಿ ಒದಗಿಸಲಾಗುವ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.
ತ್ರೈಮಾಸಿಕ ಕೆ.ಡಿ.ಪಿ. ಸಭೆಗೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ತೋಟಗಾರಿಕೆ ಇಲಾಖೆಯಿಂದ ಹೊಸ ಬೆಳೆಗಳ ಪ್ರದೇಶಾಭುವೃದ್ಧಿ ಕುರಿತು ಹೆಚ್ಚಿನ ಜಾಗೃತಿ ಹಾಗೂ ಪ್ರಚಾರ ಕೈಗೊಳ್ಳಬೇಕು. ಪಡಿತರ ಚೀಟಿ ವಿತರಣೆಯಲ್ಲಿ ಮಾನದಂಡಗಳನ್ನು ಮೀರಿ ವಿತರಣೆ ಮಾಡಿದ್ದಲ್ಲಿ ಅಂತಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಪಡಿತರ ಕಾರ್ಡ ವಿತರಿಸಿದ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲು ತಿಳಿಸಿದರು.
ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ ಜಿಲ್ಲೆಯಲ್ಲಿನ ಕೃಷಿ ಹೊಂಡಗಳನ್ನು ಪರಿಶೀಲಿಸಿ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಸಾಮಗ್ರಿಗಳನ್ನು ಅಳವಡಿಸಲು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
**ನಕಲಿ ಪತ್ರಕರ್ತರ ವಿರುದ್ಧ ಕ್ರಮಕ್ಕೆ ಒತ್ತಾಯ**
ತಾಲೂಕು ಕೇಂದ್ರಗಳಲ್ಲಿ ನಕಲಿ ಪತ್ರಕರ್ತರ ಹಾವಳಿಯಿಂದಾಗಿ ಕಚೇರಿ ಕಾರ್ಯನಿರ್ವಹಣೆಗೆ ತುಂಬ ತೊಂದರೆಯಾಗುತ್ತಿದ್ದು ನಕಲಿ ಪತ್ರಕರ್ತರನ್ನು ಗುರುತಿಸಿ ಅಂತಹವರ ವಿರುದ್ಧ ಕ್ರಮಕ್ಕೆ ಸಮಿತಿ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ,ಶಾಸಕರಾದ ಬಾಬಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಹಕ್ಷರಾದ ವಿನಯ ನಾವಲಗಟ್ಟಿ, ಕೆ.ಡಿ.ಪಿ ನಾಮನಿರ್ದೆಶಿತ ಸದಸ್ಯರು, ಪೊಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.*******************************











