ಸ್ವಸಹಾಯ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಕೋಳಿ ಮೊಟ್ಟೆ ಪೂರೈಕೆ ಕಾರ್ಯ ರಾಜ್ಯಕ್ಕೆ ಅನ್ವಯ: ಸಿಇಓ ರಾಹುಲ್ ರತ್ನಂ ಪಾಂಡೇಯ…!!

ಪ್ರಕೃತಿ ಬೆಳಗಾವಿ ಸುದ್ದಿ : ಕೊಪ್ಪಳ ಮಾರ್ಚ್ 19 : ಕೊಪ್ಪಳ ಜಿಲ್ಲೆಯ ಸ್ವಸಹಾಯ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಕೋಳಿ ಮೊಟ್ಟೆ ಪೂರೈಕೆಯಾಗುತ್ತಿರುವ ಮದರಿ ಕಾರ್ಯವು ರಾಜ್ಯಕ್ಕೆ ಅನ್ವಯವಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಾಟೀಲ್ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟç ಜೀವನೋಪಾಯ ಅಭಿಯಾನ, ಕರ್ನಾಟಕ, ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಜಿಲ್ಲೆಯ ಕುದರಿಮೋತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಸಹಾಯ ಗುಂಪಿನವರು ಕೋಳಿ ಸಾಕಾಣಿಕೆ ಘಟಕವನ್ನು ಪ್ರಾರಂಭಿಸಿ, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡುತ್ತಿರುವ ಕಾರ್ಯವು ರಾಜ್ಯದ ಗಮನ ಸೆಳೆದಿದ್ದು, ಇದೇ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಮುಖ್ಯಮಂತ್ರಿಗಳು 2025ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಕುದರಿಮೋತಿ ಸ್ವಸಹಾಯ ಗುಂಪಿನವರ ಮಾದರಿ ಕಾರ್ಯಕ್ಕೆ ಪ್ರಶಸ್ತಿಯೂ ದೊರೆತಿದ್ದು, ಜಿಲ್ಲಾ ಪಂಚಾಯತ್ ವತಿಯಿಂದ ಅಭಿನಂಧನೆ ಸಲ್ಲಿಸುತ್ತೇನೆ. ಈ ವ್ಯವಸ್ಥೆಯು ಕರ್ನಾಟದಲ್ಲಿ ಯಶಸ್ವಿಯಾಗಿ ಮುಂದಿನ ದಿನಮಾನಗಳಲ್ಲಿ ದೇಶಾದ್ಯಂತ ವಿಸ್ತರಣೆಯಾಗಲಿದೆ ಎಂದರು.
2025ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೆಚ್ಚು ಅನುದಾನವನ್ನು ನೀಡಿದೆ. ಇದರ ಸದ್ಬಳಕೆಯಾಗಬೇಕು. ಮಕ್ಕಳ ಪಾಲನೆ ಸೇರಿದಂತೆ ಮನೆಯ ಕೆಲಸ ಕಾರ್ಯಗಳ ಜೊತೆಗೆ ಕಛೇರಿ ಕೆಲಸವನ್ನು ಯಶಶ್ವಿಯಾಗಿ ಮಾಡುವ ಶಕ್ತಿ ಮಹಿಳೆಯರಲ್ಲಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಬೇಕು. ಬಾಲ್ಯವಿವಾಹವು ಶಿಕ್ಷಾರ್ಹ ಅಪರಾದವಾಗಿದ್ದು, ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ಎಲ್ಲರೂ ಸಹಕರಿಸಬೇಕು. ರಾಜಕೀಯದಲ್ಲಿರುವ ಮಹಿಳಾ ಜನಪ್ರತಿನಿಧಿಗಳ ಆಡಳಿತದಲ್ಲಿ ಪುರುಷರ ಹಸ್ತಕ್ಷೇಪ ಕೊನೆಯಾಗಬೇಕು. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಮಹಿಳೆಯರು ಗ್ರಾ.ಪಂ ಮಟ್ಟದಿಂದಲೇ ಸದೃಡರಾಗಬೇಕು ಎಂದು ಹೇಳಿದರು.
ಜಿ.ಪಂ ಯೋಜನಾ ನಿರ್ದೇಶಕ ಪ್ರಕಾಶ್ ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ, ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು, ಎನ್ನುವುದಕ್ಕೆ ಈ ಕಾರ್ಯಕ್ರಮಕ್ಕೆ ಸಾಕ್ಷಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕ ಪರಶುರಾಮ ವೈ ಶೆಟ್ಟಪ್ಪನವರ್ ಮಾತನಾಡಿ, ಸಂಜೀವಿನಿ ಫಲಾನುಭವಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಯ ಮೂಲಕ ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಹಿಳಾ ದಿನಾಚರಣೆ ಆಚರಣೆ ನಿಮಿತ್ತ ಜಿಲ್ಲಾ ಮಟ್ಟಕ್ಕೆ ಉತ್ತಮ ಜಿ.ಪಿ.ಎಲ್.ಎಫ್ ಹಾಗೂ ಉತ್ತಮ ಎಸ್.ಹೆಚ್.ಜಿ ಆಯ್ಕೆ ಮಾಡಿ, ಬಹುಮಾನ, ಪ್ರಮಾಣ ಪತ್ರ ಹಾಗೂ ಸವಿನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಎನ್.ಆರ್.ಎಲ್.ಎಂ ಸಂಜೀವಿನಿ ಘಟಕದ ಅಂಬಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.*************************






