ಪ್ರಕೃತಿ ಬೆಳಗಾವಿ

*ಅರ್ಹರ ಅಕ್ಕಿ ಖಾಸಗಿ ಕಂಪನಿಗಳಿಗೆ ಮಾರಾಟ ಲೋಕಾಯುಕ್ತ ದಾಳಿಯಲ್ಲಿ ಬಯಲಾಯ್ತು ಬೃಹತ್ ಅಕ್ರಮ*

*240 ಕ್ವಿಂಟಾಲ್ ಅಕ್ಕಿ ನಾಪತ್ತೆ; ಅಧಿಕಾರಿಗಳು, ಲಾರಿ ಚಾಲಕರು ಪೊಲೀಸರ ವಶಕ್ಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ಸರ್ಕಾರಿ ಅಕ್ಕಿಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗಿರುವ ಅಕ್ರಮ ಲೋಕಾಯುಕ್ತ ದಾಳಿಯಲ್ಲಿ ಬಯಲಾಗಿದೆ.

ಯಶವಂತಪುರದ ಗೋದಾಮಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಭಾರೀ ಅಕ್ರಮ ಪತ್ತೆಯಾಗಿದ್ದು, ಸ್ಥಳಕ್ಕೆ ಯಶವಂತಪುರ ಪೊಲೀಸರು ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋದಾಮಿನ ಜವಾಬ್ದಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳು, ಅಕ್ಕಿ ಸಾಗಾಟಕ್ಕೆ ಬಳಸಿದ್ದ ಲಾರಿಗಳ ಚಾಲಕರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಕ್ಕಿ ಸಾಗಾಟಕ್ಕೆ ಬಳಸಲಾಗಿದ್ದ ಎರಡು ಖಾಸಗಿ ಲಾರಿಗಳನ್ನು ಕೂಡ ಸೀಜ್ ಮಾಡಲಾಗಿದೆ.

ಪರಿಶೀಲನೆ ವೇಳೆ ಗೋದಾಮಿನಲ್ಲಿ ಒಟ್ಟು 240 ಕ್ವಿಂಟಾಲ್ ಅಕ್ಕಿ ಮೂಟೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ಇಡೀ ಗೋದಾಮಿನ ಲೆಕ್ಕ ಪರಿಶೀಲನೆ ನಡೆಸಿದ್ದು, ಈಗಾಗಲೇ 76 ಅಕ್ಕಿ ಮೂಟೆಗಳು ಹಾಗೂ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಉಳಿದ ಸುಮಾರು 100 ಕ್ವಿಂಟಾಲ್ ಅಕ್ಕಿಯನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಯಾವುದೇ ಬಿಲ್ ಇಲ್ಲದೆ ಅಕ್ಕಿ ಮೂಟೆಗಳನ್ನು ಖಾಸಗಿ ಕಂಪನಿಗಳಿಗೆ ಸಾಗಾಟ ಮಾಡಿರುವ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ.

ಅರ್ಹ ಫಲಾನುಭವಿಗಳ ಪಾಲಿಗೆ ಸೇರಬೇಕಿದ್ದ ಆಹಾರ ಧಾನ್ಯಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಗರದ 22 ಗೋದಾಮುಗಳ ಮೇಲೆ ಅಧಿಕಾರಿಗಳು ಪರಿಶೀಲನೆ ಮತ್ತು ದಾಳಿ ನಡೆಸುತ್ತಿದ್ದಾರೆ.

ಪ್ರಕರಣದ ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು ಪೊಲೀಸರು ಹಾಗೂ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.*****************************

Back to top button