*ಅನೈತಿಕ ಸಂಬಂಧಕ್ಕಾಗಿ ಮಾಜಿ ಸೈನಿಕನಿಗೆ ವಿಷವಿಕ್ಕಿ ಕೊಂದ ಪತ್ನಿ ಮತ್ತು ಪ್ರಿಯಕರ: ಬೆಳಗಾವಿಯಲ್ಲಿ ರೋಮಾಂಚಕ ಕೊಲೆ ರಹಸ್ಯ ಬಯಲು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲೆಯಲ್ಲಿ ಸುಮಾರು ಮೂರು ತಿಂಗಳ ಹಿಂದೆ ಸಂಭವಿಸಿದ್ದ ಮಾಜಿ ಸೈನಿಕನ ನಿಗೂಢ ಸಾವು, ಇದೀಗ ತನಿಖೆಯ ಬೆನ್ನಲ್ಲೇ ಅತ್ಯಂತ ರೋಮಾಂಚಕ ಹಾಗೂ ಕ್ರೂರ ಕೊಲೆ ಪ್ರಕರಣವಾಗಿ ಬದಲಾಗಿದೆ. ಆಕಸ್ಮಿಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದ ಪತಿಯನ್ನೇ, ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಆಸ್ಪತ್ರೆಯಲ್ಲೇ ವಿಷ ಹಾಕಿ ಕೊಲೆ ಮಾಡಿರುವ ಆಘಾತಕಾರಿ ಸತ್ಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ ಅವರು ಇತ್ತೀಚೆಗೆ ಹುಕ್ಕೇರಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ಸಣ್ಣ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಘಟಪ್ರಭಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೀಪ್ ಅವರು ಕ್ರಮೇಣ ಗುಣಮುಖರಾಗುತ್ತಿದ್ದರು.
ಕೊಲೆಗೆ ಕಾರಣವಾದ 2 ಕೋಟಿ ಆಸೆ ಮತ್ತು ಅನೈತಿಕ ಸಂಬಂಧ: ಸಂದೀಪ್ ಗುಣಮುಖರಾಗುತ್ತಿದ್ದದ್ದನ್ನೇ ದಾಳವಾಗಿಸಿಕೊಂಡ ಅವರ ಪತ್ನಿ ಸುಮಾ, ತನ್ನ ಅನೈತಿಕ ಸಂಬಂಧ ಎಲ್ಲಿ ಹೊರಬಂದುಬಿಡುತ್ತದೆಯೋ ಎಂಬ ಭಯದಲ್ಲಿದ್ದಳು. ಇದರೊಂದಿಗೆ, ಗಂಡ ಸತ್ತರೆ ಬರೋಬ್ಬರಿ 2 ಕೋಟಿ ರೂಪಾಯಿ ವಿಮೆ ಹಣ ಸಿಗುತ್ತದೆ ಎಂಬ ದುರಾಶೆಯೂ ಆಕೆಗೆ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸುಮಾ ತನ್ನ ಪ್ರಿಯಕರ ಪುಂಡಲೀಕನ ಜೊತೆ ಸೇರಿ ಪತಿಯನ್ನು ಮುಗಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಆಸ್ಪತ್ರೆಯಲ್ಲಿ ಸಂದೀಪ್ಗೆ ನೀಡಲಾಗುತ್ತಿದ್ದ ಸಲೈನ್ ಬಾಟಲಿಗೆ ಕ್ರೂರವಾಗಿ ಕ್ರಿಮಿನಾಶಕ ಔಷಧಿ (ವಿಷ) ಬೆರೆಸಿ ಕೊಲೆ ಮಾಡಿದ್ದಾಳೆ. ತದನಂತರ ಏನೂ ತಿಳಿಯದವಳಂತೆ, ಅಪಘಾತದ ತೀವ್ರತೆಯಿಂದಲೇ ಗಂಡ ಸತ್ತಿದ್ದಾನೆ ಎಂದು ಕಥೆ ಕಟ್ಟಿ ನಾಟಕವಾಡಿದ್ದಾಳೆ.
ಮೂರು ತಿಂಗಳ ಬಳಿಕ ಹೂತಿದ್ದ ಶವ ಹೊರಕ್ಕೆ!
ಸಂದೀಪ್ ಸಾವಿನ ಬೆನ್ನಲ್ಲೇ ಅವರ ಕುಟುಂಬಸ್ಥರಲ್ಲಿ ಮೂಡಿದ ಸಣ್ಣ ಅನುಮಾನ ಪ್ರಕರಣಕ್ಕೆ ದೊಡ್ಡ ತಿರುವು ನೀಡಿತು. ತಕ್ಷಣ ಕಾರ್ಯಪ್ರವೃತ್ತರಾದ ಯಮಕನಮರಡಿ ಸಿಪಿಐ ಜಾವೀದ್ ಮುಶಾಪುರೆ ಅವರ ನೇತೃತ್ವದಲ್ಲಿ ಯಮಕನಮರಡಿ ಹಾಗೂ ಘಟಪ್ರಭಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಪತ್ನಿಯ ಹಸಿ ಹಸಿ ಸುಳ್ಳು ಮತ್ತು ನಾಟಕ ಬಯಲಾಗಿದೆ.
ಇದು ಅಪಘಾತದ ಸಾವಲ್ಲ, ಬದಲಿಗೆ ಪತ್ನಿ ಮತ್ತು ಪ್ರಿಯಕರ ಸೇರಿ ಮಾಡಿದ ವ್ಯವಸ್ಥಿತ ಕೊಲೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಳ್ಳುತ್ತಿದ್ದಂತೆ ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತು, ಬೆಳಗಾವಿ ಉಪವಿಭಾಗಾಧಿಕಾರಿ (AC) ಶ್ರವಣಕುಮಾರ್ ನಾಯಕ್ ಅವರ ಸಮ್ಮುಖದಲ್ಲಿ ತನಿಖಾ ತಂಡವು ಮೂರು ತಿಂಗಳ ಹಿಂದೆ ಹೂಳಲಾಗಿದ್ದ ಮಾಜಿ ಯೋಧ ಸಂದೀಪ್ ಅವರ ಮೃತದೇಹವನ್ನು ಮತ್ತೊಮ್ಮೆ ಹೊರತೆಗೆದಿದೆ. ಸ್ಥಳದಲ್ಲೇ ಶವದ ಅವಶೇಷಗಳ ಮಹಜರು ನಡೆಸಿ, ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದ್ದು, ವರದಿ ಬಂದ ಬಳಿಕ ಕೊಲೆ ಸಂಪೂರ್ಣವಾಗಿ ಅಧಿಕೃತವಾಗಿ ಸಾಬೀತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬಸ್ಥರ ಕಣ್ಣೀರು – ಕಠಿಣ ಶಿಕ್ಷೆಗೆ ಆಗ್ರಹ:
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೃತರ ಸಹೋದರ ಸಂಜಯ್ ಮಂಜರಗಿ, “ನಾವೆಲ್ಲರೂ ಇದನ್ನು ಅಪಘಾತದ ಸಾವು ಎಂದೇ ಭಾವಿಸಿದ್ದೆವು. ಆದರೆ ಸಿಪಿಐ ಜಾವೀದ್ ಮುಶಾಪೂರೆ ನೇತೃತ್ವದ ಪೊಲೀಸ್ ತಂಡವು ಅತ್ಯಂತ ಚಾಣಾಕ್ಷತನದಿಂದ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದರಿಂದಲೇ ಇಂದು ಸತ್ಯ ಹೊರಬಂದಿದೆ” ಎಂದು ಪೊಲೀಸರ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಗಡಿಯಲ್ಲಿ ದೇಶ ಕಾಯ್ದು ಬಂದ ಸೈನಿಕನಿಗೆ ಮನೆಯಲ್ಲೇ ಬೆನ್ನಿಗೆ ಚೂರಿ ಹಾಕಿ, ದ್ರೋಹ ಬಗೆದು ಕೊಂದಿರುವ ಪಾಪಿಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು. ಕಾನೂನಿನಡಿಯಲ್ಲಿ ಅವರಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕು ಎಂದು ಮೃತರ ಕುಟುಂಬಸ್ಥರು ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ.********************************





