*ಕುಟುಂಬದೊಂದಿಗೆ ಯಲ್ಲಮ್ಮನ ದರ್ಶನ ಪಡೆದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಸವದತ್ತಿಯ ಪವಿತ್ರ ಕ್ಷೇತ್ರವಾದ ಯಲ್ಲಮ್ಮನ ಸನ್ನಿಧಿಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು ಗುರುವಾರ ತಮ್ಮ ಕುಟುಂಬ ಸಮೇತವಾಗಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಲ್ಲಮ್ಮನಗುಡ್ಡದಲ್ಲಿ ಸುಮಾರು ರೂ. 215 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ, 11 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧವಾಗಿದ್ದು, ಕಾಲಮಿತಿಯಲ್ಲಿ ಅದನ್ನು ಅನುಷ್ಠಾನಗೊಳಿಸಿ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ, ಮಗಳು ರೂಹಿ ಜನಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತವಾಗಿ ಯಲ್ಲಮ್ಮನ ದರ್ಶನಕ್ಕೆ ಬಂದಿರುವುದಾಗಿ ಅವರು ತಿಳಿಸಿದರು. “ಶ್ರೀಕ್ಷೇತ್ರವು ಜಾಗೃತವಾದ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಭಕ್ತರು ಭಯ-ಭಕ್ತಿ ಹಾಗೂ ಶ್ರದ್ಧೆಯಿಂದ ದೇವಿಯನ್ನು ಪ್ರಾರ್ಥಿಸಿ ಪುಣಿತರಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರ ಪತ್ನಿ ಅಂಕಿತಾ ಸೇರಿದಂತೆ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕೀರಪೂರ, ಅಯ್ಯನ್, ರೂಹಿ, ಮದು, ಸವದತ್ತಿ ನಗರಸಭೆ ಪೌರಾಯುಕ್ತ ಸಂಗನಬಸಯ್ಯ, ಮಲ್ಲು ಜಕಾತಿ, ಅಲ್ಲಮಪ್ರಭು ಪ್ರಭುನವರ, ಮಂಜುನಾಥ ಅಂಗಡಿ, ಅಮೀನ್ ಗೋರಿನಾಯ್, ಪ್ರಭು ಹಂಜಗಿ, ಸದಾನಂದ ಈಟಿ, ಜಗದನಗೌಡ ಪೊಲೇಶಿ, ಮಂಜುನಾಥಗೌಡ ಸಂಧಿಮನಿ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.******************************






