*ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ ಸುವರ್ಣಸೌಧಕ್ಕೆ ನಿರಂತರ ವಿದ್ಯುತ್ ಪೂರೈಕೆ; ವಿದ್ಯುತ್ ಸಂಪರ್ಕ ಕಡಿತದ ವದಂತಿಗಳಿಗೆ ಸ್ಪಷ್ಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ನ. 14 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ 11ರವರೆಗೆ ನಡೆಯಲಿರುವ 2026ರ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಕಲ್ಪಿಸಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಂಪೂರ್ಣ ಸಜ್ಜಾಗಿದೆ.
ಅಧಿವೇಶನದ ಹತ್ತು ದಿನಗಳ ಅವಧಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸುವರ್ಣಸೌಧ ಸೇರಿದಂತೆ ಬೆಳಗಾವಿ ನಗರದ ಪ್ರಮುಖ ಪ್ರದೇಶಗಳ ವಿದ್ಯುತ್ ವಿತರಣಾ ಜಾಲದ ಪರಿಶೀಲನೆ, ನಿರ್ವಹಣೆ ಹಾಗೂ ಅಗತ್ಯ ದುರಸ್ತಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.
ಅಧಿವೇಶನಕ್ಕೆ ಆಗಮಿಸುವ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಈ ವಾರ ವಿಶೇಷ ನಿರ್ವಹಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನವೆಂಬರ್ 14ರಂದು ಸುವರ್ಣಸೌಧಕ್ಕೆ ವಿದ್ಯುತ್ ಪೂರೈಸುವ ಫೀಡರ್ಗಳ ನಿರ್ವಹಣಾ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಈ ಕುರಿತು ಮುಂಚಿತವಾಗಿಯೇ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು.
ಸುವರ್ಣಸೌಧಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ಹರಿಕಾಕಾ ಕಾಂಪೌಂಡ್ ಹಾಗೂ ಯಡಿಯೂರಪ್ಪ ರಸ್ತೆ ಫೀಡರ್ಗಳ ಸಮಗ್ರ ಪರಿಶೀಲನೆ ನಡೆಸಿ, ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿದ್ಯುತ್ ವಿತರಣಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಅಧಿವೇಶನದ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ತಾಂತ್ರಿಕ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ:
ಸುವರ್ಣಸೌಧದ ವಿದ್ಯುತ್ ಬಿಲ್ಗಳು ನಿಗದಿತ ಅವಧಿಯೊಳಗೆ ನಿಯಮಿತವಾಗಿ ಪಾವತಿಯಾಗುತ್ತಿದ್ದು, ಯಾವುದೇ ಬಾಕಿ ಅಥವಾ ಸಂಬಂಧಿತ ಸಮಸ್ಯೆ ಇರುವುದಿಲ್ಲ. ಹೀಗಾಗಿ ಸುವರ್ಣಸೌಧದ ವಿದ್ಯುತ್ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಿರುವುದಿಲ್ಲ ಎಂದು ಹೆಸ್ಕಾಂ ಸ್ಪಷ್ಟಪಡಿಸಿದೆ.
ವಿದ್ಯುತ್ ವ್ಯವಸ್ಥೆಯಲ್ಲಿ ಸಂಭವಿಸಬಹುದಾದ ತಾಂತ್ರಿಕ ದೋಷಗಳನ್ನು ಮುಂಚಿತವಾಗಿಯೇ ಗುರುತಿಸಿ ಪರಿಹರಿಸುವುದರ ಜತೆಗೆ, ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸ್ಪಂದಿಸಿ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ನದ್ಧಗೊಳಿಸಲಾಗಿದೆ.
ಚಳಿಗಾಲದ ಅಧಿವೇಶನ ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲ ವಿದ್ಯುತ್ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗಿದ್ದು, ಮುನ್ನೆಚ್ಚರಿಕೆ, ಸಮರ್ಪಕ ನಿರ್ವಹಣೆ ಹಾಗೂ ತ್ವರಿತ ಸ್ಪಂದನೆಯ ಮೂಲಕ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಸೇವೆ ಒದಗಿಸಲು ಹೆಸ್ಕಾಂ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೋಟ್ : “ಚಳಿಗಾಲದ ಅಧಿವೇಶನಕ್ಕೆ ಯಾವುದೇ ಅಡಚಣೆಯಿಲ್ಲದೆ ನಿರಂತರ, ಗುಣಮಟ್ಟದ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಕಲ್ಪಿಸುವುದು ಹೆಸ್ಕಾಂನ ಪ್ರಮುಖ ಆದ್ಯತೆಯಾಗಿದೆ. ವಿದ್ಯುತ್ ವ್ಯತ್ಯಯಕ್ಕೆ ಅವಕಾಶವಾಗದಂತೆ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ಅಗತ್ಯ ನಿರ್ವಹಣೆ, ತಾಂತ್ರಿಕ ಪರಿಶೀಲನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸುವರ್ಣಸೌಧದ ವಿದ್ಯುತ್ ಬಿಲ್ಗಳು ನಿಯಮಿತವಾಗಿ ಪಾವತಿಯಾಗುತ್ತಿದ್ದು, ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ.”
ಹೇಮಂತ್ ಎನ್.
ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ…











