ಪ್ರಕೃತಿ ಬೆಳಗಾವಿ

*ಪ್ರಹ್ಲಾದ ಜೋಶಿಗೆ ತಟ್ಟಿದ ರೈತ ಹೋರಾಟದ ಬಿಸಿ ; ಸಚಿವರ ಮನೆ ಭಾರಿ ಭದ್ರತೆ*

ಪ್ರಕೃತಿ ಬೆಳಗಾವಿ ಸುದ್ದಿ : ಕಬ್ಬಿನ ಬೆಲೆ, ಎಂಎಸ್ಪಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವರ ಮನೆಯ ಸುತ್ತಮುತ್ತ ಹಿಂದೆಂದಿಗಿಂತಲೂ ಭಾರಿ ಭದ್ರತೆ ಒದಗಿಸಲಾಗಿದೆ.

ಈಗಾಗಲೇ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹತ್ತರಗಿ ಟೋಲ್‌ನಿಂದ ಬೃಹತ್ ಸಂಖ್ಯೆಯ ರೈತರು ಬುಧವಾರ ಸಂಜೆಯಿಂದಲೇ ಹುಬ್ಬಳ್ಳಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ. ಕೇಶ್ವಾಪುರ ಮಯೂರಿ ಎಸ್ಟೇಟ್‌ನಲ್ಲಿ ಇರುವ ಸಚಿವ ಜೋಶಿ ನಿವಾಸ ಸುತ್ತಲಿನ ಪ್ರದೇಶ ಅಕ್ಷರಶಃ ಭದ್ರಕೋಟೆಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಸಚಿವರ ನಿವಾಸಕ್ಕೆ ತೆರಳುವ ಸರ್ವೋದಯ ಸರ್ಕಲ್, ರಮೇಶ ಭವನ, ಶಾಂಡಿಲ್ಯಾಶ್ರಮದ ಬಳಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಜೊತೆಗೆ, 10 ಅಡಿ ಎತ್ತರದ ಕಬ್ಬಿಣದ ಗ್ರಿಲ್ ಜೋಡಿಸಲಾಗಿದೆ. ಪ್ರಮುಖವಾಗಿ ಸಚಿವರ ನಿವಾಸದ ಎದುರು ಮತ್ತು ನಿವಾಸಕ್ಕೆ ಸಂಪರ್ಕಿಸುವ ಎರಡೂ ಬದಿ ರಸ್ತೆಯಲ್ಲಿ ಗ್ರಿಲ್‌ಗಳನ್ನು ಹಾಕಲಾಗಿದೆ. ಎಲ್ಲೆಡೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿ ಬಳಿಯೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿ ಹಾಗೂ ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸಹ ನಿಯೋಜಿಸಲಾಗಿದೆ.

ಅಲ್ಲದೆ, ಸಚಿವರ ನಿವಾಸಕ್ಕೆ ಹೋಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಸುತ್ತಲಿನ ಪ್ರದೇಶದ ನಿವಾಸಿಗಳ ಓಡಾಟಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ವಯಸ್ಸಾದವರು,‌ ಮಕ್ಕಳು ತಮ್ಮ ಮನೆ ತಲುಪಲು ಒಂದು ಸುತ್ತು ಹಾಕಿ ಬರಬೇಕಿದೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಕೂಡ ಹೋಗಲು ಅವಕಾಶವಿಲ್ಲ. ಕೆಲವೊಂದು ಕಡೆ ಬ್ಯಾರಿಕೇಡ್ನ ಒಂದು ಮೂಲೆಯಲ್ಲಿ ಜಾಗ ಬಿಟ್ಟಿದ್ದು, ಮಹಿಳೆಯರು ಮಕ್ಕಳು ಮಾತ್ರ ಹಾಯ್ದು ಹೋಗುವ ಸ್ಥಿತಿ ಇದೆ.

ಈ ಕುರಿತಂತೆ ಉಮೇಶ ಶೆಟ್ಟಿ ಎಂಬವರು ಮಾತನಾಡಿ, ರೈತರು ಹಾಗೂ ಜನಪ್ರತಿನಿಧಿಗಳು ಶಾಂತ ರೀತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದು ಸಾರ್ವಜನಿಕರಿಗೆ ತೊಂದರೆಯಾಗಿದೆ. ನಮ್ಮ ಮನೆಗೆ ನಾವು ಹೋಗಲು ಸುತ್ತುವರೆದು ಹೋಗಬೇಕಿದೆ. ಇದು ಪ್ರಜಾಪ್ರಭುತ್ವಕ್ಕೆ ಅವಮಾನ. ಪ್ರತಿಭಟನೆ ಎಂಬುದೇ ಇರಬಾರದು. ಇದನ್ನು ಹಾಕಲು ರಾಜಕಾರಣಿಗಳು ಕಾರಣ ಎಂದು ವಾಗ್ದಾಳಿ ನಡೆಸಿದರು.*********************************

Leave a Reply

Your email address will not be published. Required fields are marked *

Back to top button