*ಸಾರಥಿ ನಗರದಲ್ಲಿ 11ನೇ ವರ್ಷದ ದಾಂಡಿಯಾ ಸಂಭ್ರಮಕ್ಕೆ ಚಾಲನೆ*

*ಅ.20ರವರೆಗೆ ಪ್ರತಿದಿನ ಸಂಜೆ ದಾಂಡಿಯಾ ಕಾರ್ಯಕ್ರಮ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ನಗರದ ಸಾರಥಿ ನಗರ ಆಶ್ರಯ ಕಾಲೋನಿಯ ಶ್ರೀ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿ ಹಾಗೂ ರಹವಾಸಿಗಳ ಪಂಚ್ ಕಮಿಟಿ ಮತ್ತು ಬದಲಾವಣೆ ಬೆಳಕು ಜಾನಪದ ಕಲಾ ಮತ್ತು ಕ್ರೀಡಾ ಸಂಘದ ಸಹಯೋಗದಲ್ಲಿ ದಸರಾ ಹಬ್ಬದ ಪ್ರಯುಕ್ತ 11ನೇ ವರ್ಷದ ದಾಂಡಿಯಾ ಕಾರ್ಯಕ್ರಮಕ್ಕೆ ಅಕ್ಟೋಬರ್ 11ರಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ಥಳೀಯರಾದ ಸಂಗೀತಾ ತಂಗಡಿ ಅವರು ದುರ್ಗಾದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಹಿಳೆಯರೊಂದಿಗೆ ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸ್ಥಳೀಯರು ಸೇರಿದಂತೆ ನೂರಾರು ಜನರು ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಉತ್ತರ ಕರ್ನಾಟಕದ ಜಾನಪದ ಗಾಯಕರಾದ ಮಲ್ಲಿಕಾರ್ಜುನ ಹಾಗೂ ಸುನಂದ ಅವರು ಜಾನಪದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಮೆರುಗು ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಲಾವಣೆ ಬೆಳಕು ಜಾನಪದ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷೆ ಜನಾಬಾಯಿ ಸತೀಶ್ ಗುಡಗೇನಟ್ಟಿ ವಹಿಸಿದ್ದರು. ಸ್ಥಳೀಯ ಯುವಕರಾದ ರಾಜು ಮನವಳ್ಳಿ ಹಾಗೂ ಪ್ರಕಾಶ್ ಪಾಟೀಲ ಸೇರಿದಂತೆ ಹಲವರು ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ನಿವಾಸಿಗಳಿಗಾಗಿ ಆಯೋಜಿಸಲಾಗಿರುವ ದಾಂಡಿಯಾ ಕಾರ್ಯಕ್ರಮವು ಅಕ್ಟೋಬರ್ 11ರಿಂದ 20ರವರೆಗೆ ಪ್ರತಿದಿನ ಸಂಜೆ 7ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಸ್ಥಳೀಯರು ದಾಂಡಿಯಾ ನೃತ್ಯದಲ್ಲಿ ಭಾಗವಹಿಸಿ ದಸರಾ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿ ಹಾಗೂ ರಹವಾಸಿಗಳ ಪಂಚ್ ಕಮಿಟಿ ಅಧ್ಯಕ್ಷ ಸತೀಶ್ ಗುಡಗೇನಟ್ಟಿ ಮನವಿ ಮಾಡಿದ್ದಾರೆ.**********************************






