*ಸಂವಿಧಾನ ಹಾಗೂ ಮತದಾನದ ಹಕ್ಕಿನ ರಕ್ಷಣೆಗೆ ಕಾಂಗ್ರೆಸ್ ಹೋರಾಟ: ದೆಹಲಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ*

ಪ್ರಕೃತಿ ಬೆಳಗಾವಿ ಸುದ್ದಿ : ನವದೆಹಲಿ : ದೇಶದಲ್ಲಿ ಸಂವಿಧಾನ ಹಾಗೂ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಷ್ಟ್ರವ್ಯಾಪಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ (ಪೀಸ್ ಮಾರ್ಚ್) ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್ ಪ್ರತಿಭಟನೆಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹೋರಾಟ ಕೇವಲ ರಾಜಕೀಯ ಪಕ್ಷಕ್ಕಷ್ಟೇ ಸೀಮಿತವಲ್ಲ, ಬದಲಿಗೆ ಇಡೀ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಕರೆಯ ಮೇರೆಗೆ ದೇಶದ ಎಲ್ಲ ರಾಜ್ಯಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರು ದೆಹಲಿಗೆ ಆಗಮಿಸಿದ್ದಾರೆ. ಮಹಿಳೆ-ಪುರುಷರೆಂಬ ಭೇದವಿಲ್ಲದೆ, ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು ಹಾಗೂ ಸಮಸ್ತ ನಾಗರಿಕರು ಸಂವಿಧಾನ ರಕ್ಷಣೆಯ ಈ ಪೀಸ್ ಮಾರ್ಚ್‌ನಲ್ಲಿ ಕೈಜೋಡಿಸುವಂತೆ ಕರೆ ನೀಡಲಾಗಿದೆ. ಈ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಮೂಲಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವ ಕಾರ್ಯಕ್ರಮವೂ ಇದೆ ಎಂದು ಅವರು ವಿವರಿಸಿದರು.
ಮತದಾನದ ಹಕ್ಕು ಕಸಿಯುವ ಹುನ್ನಾರ:
“ಭಾರತ ದೇಶದ ಇತಿಹಾಸಕ್ಕೆ ಜೀವಂತ ಸಾಕ್ಷಿ ನಮ್ಮ ಸಂವಿಧಾನ. ಸಂವಿಧಾನ ನೀಡಿರುವ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದರೆ ಅದು ಮತದಾನದ ಹಕ್ಕು. ಬಡವ-ಶ್ರೀಮಂತ ಹಾಗೂ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನವಾಗಿ ಸಿಕ್ಕಿರುವ ಈ ಅಮೂಲ್ಯ ಹಕ್ಕನ್ನು ಇಂದು ಕಸಿದುಕೊಳ್ಳಲಾಗುತ್ತಿದೆ. ಮತಗಳ ಕಳ್ಳತನ (ವೋಟ್ ಚೋರಿ) ಮಾಡುವ ಮೂಲಕ ಪ್ರಜಾಪ್ರಭುತ್ವದ ಮೂಲ ಅಡಿಪಾಯವನ್ನೇ ಬುಡಮೇಲು ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದರು.
ಭಾರತ ದೇಶ ಗಟ್ಟಿಯಾಗಿ ಉಳಿದಿರುವುದಕ್ಕೆ ಇಲ್ಲಿನ ಸಂವಿಧಾನ ಮತ್ತು ಪ್ರಜಾಪ್ರಭುತ್ವವೇ ಕಾರಣ. ಆದರೆ ಇಂದು ಅದೇ ಸಂವಿಧಾನಕ್ಕೆ ಕೊಡಲಿ ಪೆಟ್ಟು ಬೀಳುತ್ತಿರುವುದರಿಂದ, ದೇಶದ ಮೂಲೆ ಮೂಲೆಗಳಿಂದ ನಾಯಕರು ದೆಹಲಿಗೆ ಬಂದು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.********************************






