ಪ್ರಕೃತಿ ಬೆಳಗಾವಿ

*ಬೆಳಗಾವಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ‘ಕ್ರೀಡಾ ಮತ್ತು ಕಲಾ ಉತ್ಸವ’ಕ್ಕೆ ಚಾಲನೆ*

*ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕ್ರೀಡೆ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಕಾರಣವಾಗಿದ್ದು, ಕ್ರೀಡಾ ಮನೋಭಾವ ಹೊಂದಿರುವವರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ. ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡಬೇಕು ಎಂದು ಬೆಳಗಾವಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ಕಾರ್ಮಿಕ ಮತ್ತು ಕಲ್ಯಾಣ ಶಾಖೆ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ವಿಭಾಗ ಮಟ್ಟದ ‘ಕ್ರೀಡಾ ಮತ್ತು ಕಲಾ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ದೈಹಿಕ ಚಟುವಟಿಕೆಗೆ ಸಮಯ ನೀಡಬೇಕು. ಬಾಲ್ಯದಿಂದಲೂ ತಮಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಸೇವೆಯ ಒತ್ತಡದ ನಡುವೆಯೂ ದೈಹಿಕ ವ್ಯಾಯಾಮಕ್ಕೆ ಸಮಯ ನೀಡುತ್ತಿರುವುದರಿಂದ ಲವಲವಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಕ್ರೀಡೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವವೇ ಮುಖ್ಯ. ಕೆಲಸದ ಒತ್ತಡದ ನಡುವೆಯೂ ಸಿಬ್ಬಂದಿ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಕೇವಲ ಓದು, ಬರಹ ಅಥವಾ ಶಾಲಾ-ಕಾಲೇಜು ಶಿಕ್ಷಣದಿಂದ ಮಾತ್ರ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ಕ್ರೀಡೆಯೂ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಸಿಬ್ಬಂದಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಘಟಕ ಹಾಗೂ ವಿಭಾಗಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಕ್ರೀಡಾಕೂಟದಲ್ಲಿ ಇಲಾಖೆಯ ಸಿಬ್ಬಂದಿಗಾಗಿ 100 ಮೀಟರ್, 200 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ವಿಭಾಗೀಯ ತಾಂತ್ರಿಕ ಶಿಲ್ಪಿ ನಿತಿನ್ ಗಡದೆ, ವಿಭಾಗೀಯ ಲೆಕ್ಕಾಧಿಕಾರಿ ಸಂಜಯ ಮಾಸುಮಳಿ, ವಿಭಾಗೀಯ ಭದ್ರತಾಧಿಕಾರಿ ದಶರಥ ಕೆಳಗೇರಿ, ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಅಧಿಕಾರಿ ಕೆ.ಜಿ. ಶೃತಿ, ಘಟಕ ವ್ಯವಸ್ಥಾಪಕ ವಿಜಯಕುಮಾರ ಕುಮಟಳ್ಳಿ, ಸಹಾಯಕ ಆಡಳಿತಾಧಿಕಾರಿ ವಿದ್ಯಾ ಕಾಂಬಳೆ, ಕ್ರೀಡಾ ಸಮಿತಿ ಸದಸ್ಯ ಸುರೇಶ ಯರಡ್ಡಿ ವಂದಿಸಿದರು, ಎಸ್.ಐ. ಕೋಲಕಾರ, ಹರ್ಷವರ್ಧನ್ ಸಿಂಗಾಡಿ, ಎಲ್.ಬಿ. ನಾಯಕ, ಆರ್.ಎಲ್. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.******************************

Leave a Reply

Your email address will not be published. Required fields are marked *

Back to top button