*ಮಾದಕ ವಸ್ತು ಮಾರಾಟ ಆರೋಪಿ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಯುವಕನೋರ್ವನನ್ನು ಬಂಧಿಸಿದ್ದಾರೆ.
ಸಮರ್ಥನಗರದ ಬಳ್ಳಾರಿ ನಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅ.3ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತನನ್ನು ಸತ್ಯಂ ಸಂತೋಷ ಕಾವೇಟಿಯಾ (21), ಶಾಸ್ತ್ರಿನಗರ ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿಯು ಹೋಂಡಾ ಆಕ್ಟಿವಾ ಸ್ಕೂಟರ್ನ ಡಿಕ್ಕಿಯಲ್ಲಿ ಮೆಥಾಂಫೆಟಮೈನ್ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ದಾಳಿ ವೇಳೆ ಆತನಿಂದ ₹45 ಸಾವಿರ ಮೌಲ್ಯದ ಮೆಥಾಂಫೆಟಮೈನ್ ಹಾಗೂ ₹20 ಸಾವಿರ ಮೌಲ್ಯದ ಹೋಂಡಾ ಆಕ್ಟಿವಾ ಸ್ಕೂಟರ್ ಸೇರಿ ಒಟ್ಟು ₹65 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 221/2026, ಎನ್ಡಿಪಿಎಸ್ ಕಾಯ್ದೆಯ ಕಲಂ 8(c), 22(b) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಸಿಸಿಬಿ ಪಿಐ ಮಂಜುನಾಥ ನಾಯಿಕ, ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.*********************************






