*ಹುಲಿ ಬೀರ’ ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ಪ್ರತಿಬಿಂಬ: ಸುಭಾಷ್ ಪಾಟೀಲ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಅ. 2ರಂದು ಬಿಡುಗಡೆಯಾದ ‘ಹುಲಿ ಬೀರ’ ಚಿತ್ರವು ಉತ್ತರ ಕರ್ನಾಟಕದ ಗ್ರಾಮೀಣ ಬದುಕು, ಇಲ್ಲಿನ ಸಂಸ್ಕೃತಿ, ಸಂಬಂಧಗಳ ಮೌಲ್ಯ, ಸ್ನೇಹ, ಪ್ರೀತಿ ಹಾಗೂ ಮಾನವೀಯತೆಯನ್ನು ಅತ್ಯಂತ ಸಹಜವಾಗಿ ತೆರೆಗೆ ತಂದಿದ್ದು, ಪ್ರೇಕ್ಷಕರ ಮನ ಗೆಲ್ಲುತ್ತಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕದ ಶಕ್ತಿ ದೇವತೆ ಜಗನ್ಮಾತೆ ತಾಯಿ ಯಲ್ಲಮ್ಮನ ಪಾತ್ರವನ್ನು ಭಕ್ತಿ, ಭಾವನೆ ಹಾಗೂ ವೈಭವದೊಂದಿಗೆ ಚಿತ್ರಿಸಿರುವುದು ವಿಶೇಷವಾಗಿದೆ. ತಾಯಿ ಯಲ್ಲಮ್ಮನ ಪಾತ್ರದ ಚಿತ್ರಣವು ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ಪ್ರೇಕ್ಷಕರಲ್ಲಿ ಭಕ್ತಿಭಾವ ಮೂಡಿಸುತ್ತದೆ ಎಂದರು.
ನಾಯಕ ಅಂಜನ್ (ರೂರಲ್ ಅಂಜನ್) ಅವರು ‘ಬೀರ’ನ ಪಾತ್ರದಲ್ಲಿ ಹಳ್ಳಿ ಹುಡುಗನಾಗಿ ಸಹಜವಾಗಿ ಅಭಿನಯಿಸಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರ ಅನುಭವಿ ಅಭಿನಯ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ. ನಾಯಕಿ ಚೈತ್ರಾ ತೋಟದ್ ವಿಲನ್ ಪಾತ್ರದಲ್ಲಿ ರೇವಣ್ಣ ಕಣಕಿಕೊಡಿ ಸೇರಿದಂತೆ ಎಲ್ಲ ಕಲಾವಿದರು ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿ ಹಾಗೂ ಜೀವನಶೈಲಿಗೆ ತಕ್ಕಂತೆ ಉತ್ತಮ ಅಭಿನಯ ನೀಡಿದ್ದಾರೆ ಎಂದು ಶ್ಲಾಘಿಸಿದರು.
‘ಹುಲಿ ಬೀರ’ ಕೇವಲ ಮನರಂಜನೆಯ ಚಿತ್ರವಾಗಿರದೆ, ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಜನಜೀವನ ಹಾಗೂ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಚಿತ್ರವಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಇಂತಹ ಪ್ರಯತ್ನಗಳಿಗೆ ಸಮಾಜ ಹಾಗೂ ಜನರ ಬೆಂಬಲ ಅಗತ್ಯವಾಗಿದೆ ಎಂದರು.
ಉತ್ತರ ಕರ್ನಾಟಕದ ಪ್ರತಿಭಾವಂತ ಕಲಾವಿದರು ಹಾಗೂ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜನರು ಕುಟುಂಬ ಸಮೇತರಾಗಿ ‘ಹುಲಿ ಬೀರ’ ಚಿತ್ರವನ್ನು ವೀಕ್ಷಿಸಬೇಕು. ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುವ ಮೂಲಕ ಇನ್ನಷ್ಟು ಜನರನ್ನು ತಲುಪಲಿ ಎಂದು ಸುಭಾಷ್ ಪಾಟೀಲ್ ಶುಭ ಹಾರೈಸಿದರು.*********************************






