*ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಕ್ಕೆ ಹಿಂದೇಟು: ವಿಪರ್ಯಾಸ – ಅಶೋಕ ಚಂದರಗಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಹಾಗೂ ಉಪ ಮಹಾಪೌರ ಹುದ್ದೆಗಳನ್ನು ಅಲಂಕರಿಸಿರುವವರಲ್ಲಿ ಒಬ್ಬರು ನೇಕಾರ ಸಮುದಾಯಕ್ಕೆ ಸೇರಿದವರಾಗಿದ್ದರೆ, ಮತ್ತೊಬ್ಬರು ಲಿಂಗಾಯತ ಸಮಾಜದವರಾಗಿದ್ದಾರೆ. ಈ ಎರಡೂ ಸಮಾಜಗಳು ಬೆಳಗಾವಿಯ ಗಡಿ ಹೋರಾಟದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತಲೇ ಬಂದಿವೆ. ಆದರೆ, ಇದೇ ಸಮಾಜಗಳಿಗೆ ಸೇರಿದ ಇಬ್ಬರೂ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದರು.
ಭಾನುವಾರ ನಗರದ ವಡಗಾವಿಯಲ್ಲಿ ಗಡಿನಾಡು ಕನ್ನಡಿಗರ ಸೇನೆಯ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಐದು ದಶಕಗಳಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಚಳವಳಿಗಳಲ್ಲಿ ಭಾಗವಹಿಸಿದವರ ಪೈಕಿ ಈ ಭಾಗದ ಕನ್ನಡಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 1988ರಲ್ಲಿ ಬೆಂಗಳೂರಿಗೆ ತೆರಳಿದ್ದ 1200 ಜನರ ರೈಲು ಜಾಥಾದಲ್ಲಿ ಶೇ.90ರಷ್ಟು ಮಂದಿ ಈ ಭಾಗದವರೇ ಇದ್ದರು ಎಂದು ಸ್ಮರಿಸಿಕೊಂಡರು.
ಬೆಳಗಾವಿಯ 22 ಸಮಾನ ಮನಸ್ಕ ಕನ್ನಡಪರ ಸಂಘಟನೆಗಳು ಕಳೆದ ಮಾರ್ಚ್ 26ರಿಂದ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿವೆ. ಗೊತ್ತುವಳಿ ಅಂಗೀಕಾರವಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಅಪ್ಪಟ ಕನ್ನಡಿಗರಾದ ಮಹಾಪೌರರು ಮತ್ತು ಉಪ ಮಹಾಪೌರರು ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕು. ಈ ಪ್ರದೇಶದ ಜನರಿಗೆ ಕನ್ನಡಾಭಿಮಾನ ರಕ್ತಗತವಾಗಿ ಬಂದಿದೆ. ಇಲ್ಲಿನ ಜನರಿಗೆ ಕನ್ನಡಾಭಿಮಾನವನ್ನು ಹೇಳಿಕೊಡುವ ದುಸ್ಸಾಹಸಕ್ಕೆ ತಾವು ಕೈಹಾಕುವುದಿಲ್ಲ ಎಂದು ಅಶೋಕ ಚಂದರಗಿ ಹೇಳಿದರು.
ಪಾಲಿಕೆಯ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ದೀರ್ಘಕಾಲದ ನಂತರ ಈ ಭಾಗದಲ್ಲಿ ಕನ್ನಡ ಸಂಘಟನೆಯೊಂದರ ಘಟಕ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿ. ನೇಕಾರಿಕೆ ಉದ್ಯೋಗದಲ್ಲಿನ ಸಂಕಷ್ಟಗಳಿಂದಾಗಿ ಹೋರಾಟದ ತೀವ್ರತೆ ಕೊಂಚ ಕಡಿಮೆಯಾಗಿದೆ. ಆದರೆ, ಕನ್ನಡಾಭಿಮಾನದಲ್ಲಿ ಯಾವುದೇ ಕೊರತೆಯಾಗಿಲ್ಲ ಎಂದು ಹೇಳಿದರು.
ಇದೇ ವೇಳೆ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆಯ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸೇನೆಯ ರಾಜ್ಯ ಉಪಾಧ್ಯಕ್ಷೆ ವಂದನಾ ಹೊರಕೇರಿ, ಆನಂದ ಬಿಲಾವರ, ಸಂತೋಷ ಮಾಸೇನಟ್ಟಿ, ಮಂಜುನಾಥ ಪಾಸ್ತಿ, ರಂಜನ್ ಹಳಬರ, ರಾಹುಲ್ ಭೋಸ್ಲೆ, ಸಿದ್ದರಾಯ ಮಾಸೇನಟ್ಟಿ, ಸಾಗರ್ ಕೋಲ್ಕರ್ ಸೇರಿದಂತೆ ಸೇನೆಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಎಸ್.ಎಸ್. ಮೂಕನವರ ಅವರು ಆರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.**********************************





