ಪ್ರಕೃತಿ ಬೆಳಗಾವಿ

*ಮಂಗಾಯಿ ದೇವಿ ಜಾತ್ರೆ ವೇಳೆ ಪ್ರಾಣಿ-ಪಕ್ಷಿಗಳ ಬಲಿ ನಿಷೇಧ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ನಗರದ ವಡಗಾಂವ್‌ನಲ್ಲಿ ಆಗಸ್ಟ್ 11ರಿಂದ ಆರಂಭವಾಗಲಿರುವ ವಾರ್ಷಿಕ ಮಂಗಾಯಿ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ, ದೇವಸ್ಥಾನದ ಆವರಣ ಹಾಗೂ ವಡಗಾಂವ್ ವ್ಯಾಪ್ತಿಯಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಬಲಿ ನೀಡುವುದನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಿಷೇಧಿಸಿದ್ದಾರೆ.

ಈ ಆದೇಶವು ಆಗಸ್ಟ್ 11ರಿಂದ ಜಾತ್ರೆ ಮುಕ್ತಾಯಗೊಳ್ಳುವವರೆಗೆ ಜಾರಿಯಲ್ಲಿರಲಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಂಗಾಯಿ ದೇವಿಯು ಸಾವಿರಾರು ಭಕ್ತರ ಆರಾಧ್ಯ ದೇವಿಯಾಗಿದ್ದು, ಪ್ರತಿವರ್ಷ ನಡೆಯುವ ಜಾತ್ರೆಗೆ ಬೆಳಗಾವಿ ಸೇರಿದಂತೆ ನೆರೆಯ ಜಿಲ್ಲೆಗಳು ಹಾಗೂ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ, ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ, 1959, ಅದರಡಿ ರೂಪಿಸಲಾದ 1963ರ ನಿಯಮಗಳು ಹಾಗೂ 1975ರ ತಿದ್ದುಪಡಿ ಕಾಯ್ದೆಗಳ ಅನ್ವಯ ದೇವಸ್ಥಾನಗಳಲ್ಲಿ ಅಥವಾ ಧಾರ್ಮಿಕ ಪೂಜೆಯ ಹೆಸರಿನಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬೆಳಗಾವಿಯ ಪ್ರಮುಖ ಸಾಂಪ್ರದಾಯಿಕ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಮಂಗಾಯಿ ದೇವಿ ಜಾತ್ರೆಯನ್ನು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಾತ್ರೆಯ ಯಶಸ್ವಿ ಹಾಗೂ ಶಾಂತಿಯುತ ಆಯೋಜನೆಗಾಗಿ ಭಕ್ತರು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.*********************************

Leave a Reply

Your email address will not be published. Required fields are marked *

Back to top button