ಡಿ. 19 ರಂದು ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಭವಿಷ್ಯಾತ್ಮಕ ತಂತ್ರಜ್ಞಾನಗಳ ಅಭಿವೃದ್ಧಿ ಸಮ್ಮೇಳನ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇಲ್ಲಿನ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಪ್ರಥಮ ಅಂತಾರಾಷ್ಟ್ರೀಯ ಭವಿಷ್ಯಾತ್ಮಕ ತಂತ್ರಜ್ಞಾನಗಳ ಅಭಿವೃದ್ಧಿ ಸಮ್ಮೇಳನ’ವನ್ನು ಡಿಸೆಂಬರ್ 19 ರಂದು ಆಯೋಜಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂದಿ ತಿಳಿಸಿದ್ದಾರೆ.
ಈ ಸಮ್ಮೇಳನವನ್ನು ಅಂತರಾಷ್ಟ್ರೀಯ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಸಹಯೊಗದೊಂದಿಗೆ ಹಮಿಕೊಳ್ಳಲಾಗುತ್ತಿದ್ದು, ದೇಶ ವಿದೇಶಗಳ ಶೈಕ್ಷಣಿಕ ವಿದ್ವಾಂಸರು, ಸಂಶೋಧಕರು, ಕೈಗಾರಿಕಾ ತಜ್ಞರು ಹಾಗೂ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಲಿದ್ದಾರೆ. ಆ ಮೂಲಕ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಭವಿಷ್ಯಾತ್ಮಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು, ಉದಯೋನ್ಮುಖ ಪ್ರವೃತ್ತಿಗಳು ಮತ್ತು ಮುಂದಿನ ಸವಾಲುಗಳ ಕುರಿತು ಚರ್ಚಿಸಲಿದ್ದಾರೆ.
ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಸಮ್ಮೇಳನವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿದ್ಯಾಶಂಕರ ಎಸ್. ಉದ್ಘಾಟಿಸಲ್ಲಿದ್ದು ಹಾವೇರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುರೇಶ ಎಚ್. ಜಂಗಮಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲಗೊಳ್ಳಲ್ಲಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಆರ್. ಎಚ್. ಗೌಡರ ಸಂಪನ್ಮೂಲ ವ್ಯಕ್ತಿಯಾಗಿ ಪಾಲಗೊಳ್ಳಲಿರುವ ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್.ಜಿ.ಬಿ.ಐ.ಟಿ ಸ್ಥಾನಿಕ ಆಡಳಿತ ಮನಡಳಿಯ ಅಧ್ಯಕ್ಷ ಡಾ. ಎಫ್. ವಿ. ಮಾನ್ವಿ ವಹಿಸಲಿದ್ದಾರೆ.
ಎಸ್.ಜಿ.ಬಿ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂದಿ ಸಮ್ಮೇಳನದ ಅಧ್ಯಕ್ಷರಾಗಿ ಭವಿಷ್ಯದ ಸಂಶೋಧಕರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸಮ್ಮೇಳನದಲ್ಲಿ ಡಾ. ಸುಪಣ್ಣ ಎಸ್. ಶಿರಗುಪ್ಪೆ, ಡಾ. ಶಂಕರಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಸುಮಾರು 4,000 ಸಂಶೋಧನಾ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗಲು ಸಲ್ಲಿಕೆಯಾಗಿದ್ದು, ಕಠಿಣ ಸ್ವವಿಮರ್ಶಾ ಪ್ರಕ್ರಿಯೆಯ ಮೂಲಕ ಅವುಗಳಲ್ಲಿ 300 ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುವುದು. ಆಸಕ್ತ ಸಂಶೋಧಕರು ಈಗಲೂ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದಾರೆ.*********************************






