ಪ್ರಕೃತಿ ಬೆಳಗಾವಿ

ದೇಶದ ಅಭಿವೃದ್ಧಿಯಲ್ಲಿ ಎನ್ ಎಸ್ ಎಸ್ ಪಾತ್ರ ಮಹತ್ವದ್ದು; ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳ ಮತ್ತು ಸ್ವಯಂಸೇವಕರ ಪಾತ್ರ ಮಹತ್ವವಾದದ್ದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಎಂ. ತ್ಯಾಗರಾಜ ಹೇಳಿದರು.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಗುರುವಾರ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ “ರಾಣಿ ಚನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಕ್ರಮದ” ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜಸೇವೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಮತ್ತು ದೇಶದ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಹುಟ್ಟಿನಿಂದ ಯಾರಲ್ಲಿಯೂ ನಾಯಕತ್ವದ ಗುಣಗಳು ಬರುವುದಿಲ್ಲ. ಪರಿಸರ, ಪ್ರಭಾವ, ಆಸಕ್ತಿ, ಅಭಿರುಚಿಗಳು ವ್ಯಕ್ತಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಯಲು ಕಾರಣವಾಗುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶವೂ ಇದೇ ಆಗಬೇಕು ಎಂದರು.

ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ, ರಾಷ್ಟ್ರೀಯ ಸೇವಾ ಯೋಜನೆಯು ಯುವಶಕ್ತಿಗೆ ತನ್ನನ್ನು ತಾನು ಕಂಡುಕೊಳ್ಳಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಒಂದು ಸದಾವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಪ್ರಶಸ್ತಿ ಪ್ರಧಾನ ಸಮಾರಂಭದ ನಂತರ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಿಗೆ
ಬೆಂಗಳೂರಿನ ರಾ.ಸೇ.ಯೋ. ಪ್ರಾದೇಶಿಕ ಕೇಂದ್ರದ ಯುವ ಅಧಿಕಾರಿಗಳಾದ ಪಿ.ಎನ್. ಸಂತೋಷ  ಅವರ ನೇತೃತ್ವದಲ್ಲಿ  ಪುನಶ್ಚೇತನ ಕಾರ್ಯಕ್ರಮ ಜರಗಿತು.

ಎನ್.ಎಸ್.ಎಸ್.ನ ಹೊಸ ಮಾರ್ಗಸೂಚಿಗಳು, ಯೋಜನೆಯ ಸಮರ್ಥ ಅನುಷ್ಠಾನ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುವ ಕುರಿತು ತರಬೇತಿ ಹಾಗೂ ಚರ್ಚೆಗಳನ್ನು ನಡೆಸಿದರು.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಘಟಕ ಎಂದು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಬಿ.ಎಡ್. ಮಹಾವಿದ್ಯಾಲಯ ಹಾಗೂ ವಿಜಯಪೂರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯಗಳಿಗೆ ರಾಣಿ ಚನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ಭರತೇಶ ವಾಣಿಜ್ಯ ಮಹಾವಿದ್ಯಾಲಯದ ಕಾರ್ಯಕ್ರಮ ಅಧಿಕಾರಿ ಯಲ್ಲಪ್ಪ ಧಬಾಲಿ, ಉತ್ತಮ ಸ್ವಯಂಸೇವಕರಾಗಿ ಗಣೇಶ ಹೊಸಟ್ಟಿ, ಪೂಜಾ ಕಾಮಣ್ಣನವರ, ರೂಪಾ ತೇನಗಿ ಪಡೆದುಕೊಂಡರು.

ಈ ವೇಳೆ ಭಾರತ ಸರ್ಕಾರದ ರಾ.ಸೇ.ಯೋ. ಪ್ರಾದೇಶಿಕ ಕೇಂದ್ರ, ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕರಾದ  ಗಿರಿಧರ ಉಪಾಧ್ಯಾಯ, ಜಿಲ್ಲಾ ನೂಡಲ್ ಅಧಿಕಾರಿ ಡಾ. ಸಂಜೀವ ತಳವಾರ, ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿಗಳು, ತಾಲೂಕಾ ಪ್ರಭಾರಿ ಸಂಯೋಜನಾಧಿರಿಗಳು, ಪ್ರಾಚಾರ್ಯರು ಇದ್ದರು.
ರಾಧಿಕಾ ಚವಟಗಿ ಪ್ರಾರ್ಥನೆ ಗೀತೆ ಹಾಡಿದರು. ಹರ್ಷಿತಾ ಮರಳಿ, ಸಂಯೋಜನಾಧಿಕಾರಿ ಡಾ. ಕನಕಪ್ಪ ಪೂಜಾರ ಸ್ವಾಗತಿಸಿದರು. ಚಿಕ್ಕೂಡಿ ಶೈಕ್ಷಣಿಕ ಜಿಲ್ಲೆಯ ಪ್ರಭಾರಿ ಸಂಯೋಜನಾಧಿಕಾರಿ ಶಂಕರ ನಿಂಗನೂರ ನಿರೂಪಿಸಿದರು. ಜಿಲ್ಲೆಯ ಪ್ರಭಾರಿ ಸಂಯೋಜನಾಧಿಕಾರಿ ಪ್ರಕಾಶ ಕುರುಪಿ ವಂದಿಸಿದರು.*********************************

Back to top button