ಪ್ರಕೃತಿ ಬೆಳಗಾವಿ

ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿ ಬಸವಣ್ಣನವರು ವಚನಗಳು…!!

ಪ್ರಕೃತಿ ಬೆಳಗಾವಿ ಸುದ್ದಿ : ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರು ಹಳಿಯಲುಬೇಡ
ಇದೇ ಅಂತರಂಗ ಶುದ್ದಿ
ಇದೇ ಬಹಿರಂಗ ಶುದ್ದಿ
ಇದೆ ನಮ್ಮ ಕೂಡಲಸಂಗಮದೇವನೊಲವ ಪರಿ
– ಬಸವಣ್ಣ
ಇದು ಬಸವಣ್ಣನವರ ಸರಳ ವಚನವಾದರೂ, ಅತ್ಯಂತ ಅರ್ಥಪೂರ್ಣ ವಚನವಾಗಿದೆ. ನಮ್ಮ ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಹೇಗೆ ಮಾಡಿಕೊಳ್ಳಬೇಕೆಂದು ಇಲ್ಲಿ ಹೇಳಲಾಗಿದೆ. ಸ್ನಾನ ಮಾಡುವುದರಿಂದ ಹಾಗೂ ಮುಖಮಾರ್ಜನ ಮಾಡುವುದರಿಂದ ನಾವು ಬಹಿರಂಗವಾಗಿ ಸ್ವಚ್ಛವಾಗಬಹುದು. ಆದರೆ ನಮ್ಮ ಅಂತರಂಗವನ್ನು ಸ್ವಚ್ಛ ಮಾಡಿಕೊಳ್ಳುವುದು ಹೇಗೆ ? ಅದನ್ನು ಸ್ವಚ್ಛ ಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅಂತರಂಗ ಸ್ವಚ್ಛವಿಲ್ಲದೆ ನಾವು ಕೇವಲ ಬಹಿರಂಗ ಸ್ವಚ್ಛ ಮಾಡಿಕೊಳ್ಳುವುದರಿಂದ ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.

ಬಸವಣ್ಣನವರು ಹೇಳುವಂತೆ ಕಳ್ಳತನ ಮಾಡಬಾರದು. ಕಳ್ಳತನ ಮಹಾ ಪಾಪವೆಂದು ಹೇಳುತ್ತಾರೆ. ಪರರ ವಸ್ತುವನ್ನು ಅವರಿಗೆ ಹೇಳದೆ ತೆಗೆದುಕೊಳ್ಳುವುದೂ ಸಹ ಕಳ್ಳತನಕ್ಕೆ ಸಮಾನ. ಎಂತಹ ಪರಿಸ್ಥಿತಿ ಎದುರಾದರು ಮನುಜ ಕಳ್ಳತನಕ್ಕೆ ಇಳಿಯಬಾರದು. ಕೊಲಬೇಡವೆಂದರೆ ಯಾರನ್ನೇ ಆಗಲಿ ಕೊಲ್ಲಬಾರದು. ಕೊಲೆ ಮಾಡುವುದು ಸಹ ಮಹಾ ಪಾಪವೆಂದು ಹೇಳುತ್ತಾರೆ. ಹಾಗೆಯೇ ಯಾವುದೇ ಪ್ರಾಣಿ ಹಿಂಸೆ ಮಾಡಬಾರದು ಎಂದೂ ಸಹ ಇದರ ಅರ್ಥ. ಬಸವಣ್ಣನವರು ಪ್ರಾಣಿಬಲಿಯನ್ನು ಎಂದಿಗೂ ಸಹಿಸುತ್ತಿರಲಿಲ್ಲ.

ಹುಸಿಯ ನುಡಿಯಲುಬೇಡ ಎಂದರೆ ಸುಳ್ಳು ಹೇಳಬಾರದು. ಕೆಲವರು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳನ್ನು ಹೇಳುತ್ತಾರೆ. ಸುಳ್ಳು ಹೇಳುವುದರಿಂದ ಮನುಷ್ಯ ನಂಬಿಕೆಗೆ ಅನರ್ಹನಾಗುತ್ತಾನೆ. ಅವನನ್ನು ಯಾರೂ ನಂಬುವುದಿಲ್ಲ. ಏನೇ ಆದರೂ ಸುಳ್ಳನ್ನು ಹೇಳಬಾರದು.

ಮುನಿಯಬೇಡ ಎಂದರೆ ಸಿಟ್ಟಿಗೇಳಬಾರದು. ‘ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ’ ಎಂಬ ಮಾತು ಕೇಳಿದ್ದೇವೆ. ‘ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ’. ಎಂಬ ಮಾತೂ ಇದೆ. ಮಾನವನ ಸಾಧನೆಗೆ ಕೋಪ ಒಳ್ಳೆಯದಲ್ಲ. ಕೋಪದಲ್ಲಿ ತೆಗೆದುಕೊಂಡ ಎಷ್ಟೋ ನಿರ್ಧಾರಗಳು ತಪ್ಪಾಗಿರುತ್ತವೆ. ಕೋಪದಿಂದ ಸಾಕಷ್ಟು ಅನಾಹುತಗಳಾಗಿವೆ. ಆದ್ದರಿಂದ ಕೋಪವನ್ನು ಬಿಟ್ಟುಬಿಡಬೇಕು.

ಅನ್ಯರಿಗೆ ಅಸಹ್ಯ ಪಡಬೇಡ ಎಂದರೆ ಬೇರೆಯವರನ್ನು ನೋಡಿ ನಾವು ಮತ್ಸರ ಪಡಬಾರದು. ಬೇರೆ ವ್ಯಕ್ತಿಯನ್ನು ನೋಡಿ ಅಸಹ್ಯ ಪಡಬಾರದು ಅಥವಾ ಮತ್ಸರ ಪಡಬಾರದು. ಹೀಗೆ ಮಾಡುವವನು ಪರರ ಏಳಿಗೆಯನ್ನು ಸಹಿಸುವುದಿಲ್ಲ. ಆದ್ದರಿಂದ ಇದು ನಮಗೆ ಒಳ್ಳೆಯದಲ್ಲ.

ತನ್ನ ಬಣ್ಣಿಸಬೇಡವೆಂದರೆ ತನ್ನನ್ನು ತಾನು ಹೊಗಳಿಕೊಳ್ಳುವುದು. ನಮ್ಮನ್ನು ನಾವು ಎಂದಿಗೂ ಹೊಗಳಿಕೊಳ್ಳಬಾರದು. ನಮ್ಮ ಸಾಧನೆಯನ್ನು ನೋಡಿ ಬೇರೆಯವರು ಹೊಗಳಬೇಕು. ಆದರೆ ಮನುಷ್ಯನಿಗೆ ಅಹಂಕಾರ ಜಾಸ್ತಿ. ತಾನೇ ಶ್ರೇಷ್ಠ, ತಾನೇ ಬುದ್ಧಿವಂತ, ತಾನೇ ಶ್ರೀಮಂತ ತನ್ನಂತೆ ಯಾರಿಲ್ಲವೆಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ. ಇದನ್ನು ಆತ್ಮಸ್ತುತಿ ಎಂದು ಕರೆಯುತ್ತಾರೆ. ಈ ಆತ್ಮಸ್ತುತಿ ಎಷ್ಟೋ ಸಲ ಅವನನ್ನು ದಾರಿ ತಪ್ಪಿಸುತ್ತದೆ.

ಇದಿರು ಹಳಿಯಲು ಬೇಡವೆಂದರೆ ಇನ್ನೊಬ್ಬ ವ್ಯಕ್ತಿಯನ್ನು ನಾವು ಹೀಯಾಳಿಸಬಾರದು. ಅವನನ್ನು ಕೀಳಾಗಿ ಕಾಣಬಾರದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಏನಾದರೊಂದು ವಿಶೇಷ ಶಕ್ತಿ ಇದ್ದೇ ಇರುತ್ತದೆ. ಅದನ್ನು ಗುರುತಿಸಬೇಕು. ನಾವು ಬೇರೆಯವರನ್ನು ಹೀಯಾಳಿಸಿದಾಗ ಅವರ ಮನಸ್ಸಿಗೆ ಆಗುವ ಗಾಯವನ್ನು ನೆನಪಿಸಿಕೊಳ್ಳಬೇಕು. ದೇಹಕ್ಕೆ ಆಗಿರುವ ಗಾಯ ಬೇಗನೆ ಮಾಡುತ್ತದೆ. ಆದರೆ ಅದೇ ವ್ಯಕ್ತಿಯ ಮನಸ್ಸಿಗೆ ಗಾಯವಾದರೆ ಅದು ಬೇಗನೆ ವಾಸಿಯಾಗುವುದಿಲ್ಲ. ಕೆಲವು ಜನರು ತಾವೇ ದೊಡ್ಡವರು ಎಂಬ ಭ್ರಮೆಯಲ್ಲಿ ಬೇರೆಯವರನ್ನು ಬೈಯುತ್ತಾ ತಿರುಗುತ್ತಿರುತ್ತಾರೆ. ಇದು ಮನುಷ್ಯನಿಗೆ ಒಳ್ಳೆಯದಲ್ಲ.

ಹೀಗೆ ಈ ಮೇಲಿನ ಐದಾರು ಕ್ರಮಗಳನ್ನು ಅನುಸರಿಸುವುದರಿಂದ ನಾವು ಅಂತರಂಗ ಹಾಗೂ ಬಹಿರಂಗ ಶುದ್ದಿಯನ್ನು ಮಾಡಿಕೊಳ್ಳಬಹುದು. ಇವುಗಳನ್ನು ಪಾಲಿಸುವುದರಿಂದ ನಾವು ಪರಿಪೂರ್ಣ ಮಾನವರಾಗುತ್ತೇವೆ. ಮನುಷ್ಯನ ಗುರಿ ಪರಿಪೂರ್ಣತೆಯಡೆಗೆ ಸಾಗಿ ಮೋಕ್ಷವನ್ನು ಸಂಪಾದಿಸುವುದೇ ಆಗಿದೆ.*********************************

✍️. ಚಿರಂಜೀವಿ
ಪ್ರೊ. ಸಿದ್ದು ಸಾವಳಸಂಗ,ತಾಜಪುರ
ಹಿರಿಯ ಕನ್ನಡ ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು
ಮಹಾತ್ಮಾಗಾಂಧಿ ವೃತ್ತ
ವಿಜಯಪುರ – 586101
ಮೊಬೈಲ್ ನಂಬರ್ – 9611789355

Back to top button