*ಗೃಹ ಲಕ್ಷ್ಮೀ ಹಣಕ್ಕಾಗಿ ಅಜ್ಜಿಯನ್ನು ಕೊಂದ ಮೊಮ್ಮಗ: ಗೋಣಿ ಚೀಲದಲ್ಲಿ ಶವ ಸಾಗಾಟ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗೃಹ ಲಕ್ಷ್ಮೀ ಯೋಜನೆಯ ಹಣಕ್ಕಾಗಿ ಅಜ್ಜಿಯನ್ನು ಕೊಲೆಯ ಮಾಡಿದ ಮೊಮ್ಮಗ ಹಾಗೂ ಆತನ ರಕ್ಷಣೆ ಮಾಡಿದ್ದ ತಂದೆಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮನ್ನಾ ಬಾಲಪ್ರಾ ಸನದಿ (78) ಕಳೆದ ನ.10ರಂದು ಪಾಶ್ಚಾಪುರ ಸಂತೆಗೆ ಹೋಗುವುದಾಗಿ ಮನೆಯಿಂದ ತೆರಳಿದ್ದರು. ಆದರೆ, ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.
ನ.15ರಂದು ಸಂಜೆ ಜಿನರಾಳ ಗ್ರಾಮದ ಬಳಿಯ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು ಎಂದರು. ಈ ಕುರಿತು ಮೃತಳ ಮಗಳು ಭೀಮನ್ನಾ ಪರಸಪ್ಪ ಈರನಟ್ಟಿ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದ ಅವರು, ತನಿಖೆಯಲ್ಲಿ ಮೃತಳ ಸ್ವಂತ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಮೃತ ವೃದ್ಧೆಗೆ ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಆರೋಪಿ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದ ಎಂದರು.
ನ.10ರಂದು ಅಜ್ಜಿಯನ್ನು ಬೈಕ್ನಲ್ಲಿ ಕರೆದುಕೊಂಡು ಗವಿ ಸಿದ್ದೇಶ್ವರ ಗುಡ್ಡಕ್ಕೆ ತೆರಳಿದ್ದ ಆರೋಪಿ, ಅಲ್ಲಿ ಗೃಹಲಕ್ಷ್ಮೀ ಹಣದ ವಿಚಾರವಾಗಿ ಮತ್ತೆ ಜಗಳವಾಡಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದಾಗ ಸಿಟ್ಟಿನಿಂದ ಆಕೆಯನ್ನು ಕೆಳಗೆ ತಳ್ಳಿ, ಕುತ್ತಿಗೆ ಹಿಸುಕಿ ಹಾಗೂ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಗುಡ್ಡದಲ್ಲೇ ಬಿಟ್ಟು, ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲಗಳನ್ನು ತಂದಿದ್ದಾನೆ.
ಮೃತಳ ಬಳಿಯಿದ್ದ 2,300 ರೂ. ನಗದು ತೆಗೆದುಕೊಂಡು, ಶವವನ್ನು ಗೋಣಿ ಚೀಲಗಳಲ್ಲಿ ತುಂಬಿದ್ದಾನೆ. ರಾತ್ರಿ ಬೈಕ್ನಲ್ಲಿ ಶವ ಸಾಗಿಸಿ ಜಿನರಾಳ ಗ್ರಾಮದ ಬಳಿಯ ಡ್ಯಾಂ ಹಿನ್ನೀರಿಗೆ ಬಂದಿದ್ದು, ಮೃತಳ ಕೊರಳಲ್ಲಿದ್ದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗೋಣಿ ಚೀಲಗಳಿಗೆ ದೊಡ್ಡ ಕಲ್ಲುಗಳನ್ನು ತುಂಬಿ ಹಿನ್ನೀರಿನಲ್ಲಿ ಎಸೆದಿದ್ದ.*****************************






