*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೆನಕನಹಳ್ಳಿಯಲ್ಲಿ ಅಭಿವೃದ್ಧಿಪಡಿಸಿದ ಸರ್ಕಾರಿ ಕೆರೆ ಹಸ್ತಾಂತರ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬ್ರಹ್ಮಲಿಂಗ ದೇವಸ್ಥಾನದ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಭಿವೃದ್ಧಿಪಡಿಸಲಾದ ಸರ್ಕಾರಿ ಕೆರೆಯ ಹಸ್ತಾಂತರ ಕಾರ್ಯಕ್ರಮ, ನಾಮಫಲಕ ಅನಾವರಣ, ಕೆರೆ ಅಂಗಳದಲ್ಲಿ ಗಿಡ ನೆಡುವುದು ಹಾಗೂ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಜರುಗಿತು.
ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆರೆಯ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಗ್ರಾಮಗಳ ಅಭಿವೃದ್ಧಿಯ ಬಗ್ಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೊಂದಿರುವ ಕನಸು ಶ್ಲಾಘನೀಯವಾಗಿದೆ.
ಯೋಜನೆಯಿಂದ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈಗಾಗಲೇ 988 ಕೆರೆಗಳ ನಾಮಫಲಕ ಅನಾವರಣ ಕಾರ್ಯಕ್ರಮ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೆನಕನಹಳ್ಳಿಯ ಕೆರೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದರ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಕಡೆಯಿಂದಲೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ರುದ್ರಕೇಸರಿ ಮಠದ ಶ್ರೀ ಹರಿ ಗುರೂಜಿ ಮಹಾರಾಜರು ಆಶೀರ್ವಚನ ನೀಡಿ, ಕೆರೆಯ ಕಾಮಗಾರಿ ಉತ್ತಮ ರೀತಿಯಲ್ಲಿ ಪೂರ್ಣಗೊಂಡಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಕೆರೆಯನ್ನು ಸಂರಕ್ಷಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ದಯಾಶೀಲ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಭಿವೃದ್ಧಿಪಡಿಸಲಾದ ಕೆರೆಯನ್ನು ಗ್ರಾಮಸ್ಥರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಬೇಕು. ಯೋಜನೆಯ ಗ್ರಾಮಾಭಿವೃದ್ಧಿ ಕಾರ್ಯಗಳು ಹಾಗೂ ಕೆರೆ ಅಭಿವೃದ್ಧಿಯ ಉದ್ದೇಶ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಎಸ್‌ಕೆಡಿಆರ್‌ಡಿಪಿ ಕಾನೂನು ಸಲಹೆಗಾರರು ಮಾತನಾಡಿ, ಅಭಿವೃದ್ಧಿಪಡಿಸಲಾದ ಕೆರೆಯನ್ನು ಸಂಬಂಧಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಇನ್ನು ಮುಂದೆ ಕೆರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮಸ್ಥರ ಮೇಲಿದೆ. ಕೆರೆ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ, ಯೋಜನೆಯ ವಿವಿಧ ಸಮಾಜಮುಖಿ ಕಾರ್ಯಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ್, ಗ್ರಾಮದ ಅಧ್ಯಕ್ಷ ಪ್ರಭಾಕರ ದೇಸೂರಕರ್, ಕೆರೆ ಸಮಿತಿ ಅಧ್ಯಕ್ಷ ಯುವರಾಜ ಪಾಟೀಲ, ಉಚಗಾವಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬಾಳು ದೇಸೂರಕರ್, ಪಟ್ಟಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಲಸಿದ್ದ ಸುಳ್ಳನ್ನವರ, ತಾಲೂಕು ಯೋಜನಾಧಿಕಾರಿಗಳು, ಕೆರೆ ಅಭಿಯಂತರು, ದೇವಸ್ಥಾನದ ಪಂಚ ಕಮಿಟಿ ಅಧ್ಯಕ್ಷ ಲಕ್ಷ್ಮಣ ಪಾಟೀಲ, ಕೆರೆ ಸಮಿತಿಯ ಸರ್ವ ಸದಸ್ಯರು, ಕೃಷಿ ಮೇಲ್ವಿಚಾರಕರು, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.********************************






