ಪ್ರಕೃತಿ ಬೆಳಗಾವಿ

*ಭಾರತ ವಾಹನ ತರಬೇತಿ ಶಾಲೆಯಿಂದ ರಸ್ತೆ ಸುರಕ್ಷತೆ, ವಾಹನ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ*

*ರಸ್ತೆ ಸುರಕ್ಷತೆ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ: ಕೆ.ವಿ. ಬಾಲಕೃಷ್ಣ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ವಾಹನಗಳ ನಿಯಮಿತ ನಿರ್ವಹಣೆ ಮತ್ತು ಚಾಲಕರಿಗೆ ತಾಂತ್ರಿಕ ತರಬೇತಿ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಡಿ.ಎಸ್‌.ಎಸ್‌. ರಾಜ್ಯಾಧ್ಯಕ್ಷ ಕೆ.ವಿ. ಬಾಲಕೃಷ್ಣ ಹೇಳಿದರು.

ನಗರದ ನೆಹರೂ ನಗರದಲ್ಲಿರುವ ಭಾರತ ವಾಹನ ತರಬೇತಿ ಶಾಲೆಯ ಕಚೇರಿಯಲ್ಲಿ ಶಾಲೆಯ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತೆ, ವಾಹನ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನಗಳನ್ನು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಚಲಾಯಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆ ಕೇವಲ ನಮ್ಮ ಜೀವದ ರಕ್ಷಣೆಗೆ ಮಾತ್ರ ಸೀಮಿತವಾಗಿರದೆ, ರಸ್ತೆಯಲ್ಲಿ ಸಂಚರಿಸುವ ಇತರರ ಜೀವದ ಸುರಕ್ಷತೆಗೂ ಮುಖ್ಯವಾಗಿದೆ. ಕಳೆದ ನಾಲ್ಕು ದಶಕಗಳಿಂದ ವಾಹನ ತರಬೇತಿ ಕ್ಷೇತ್ರದಲ್ಲಿ ಭಾರತ ವಾಹನ ತರಬೇತಿ ಶಾಲೆ ಉತ್ತಮ ಹೆಸರು ಗಳಿಸಿದೆ. ಈ ಶಾಲೆಯಲ್ಲಿ ತರಬೇತಿ ಪಡೆದವರು ಸಮರ್ಥವಾಗಿ ವಾಹನ ಚಲಾಯಿಸುವಂತಾಗಿದ್ದಾರೆ. ಉತ್ತಮ ಪ್ರಖ್ಯಾತಿ ಗಳಿಸಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಬೃಹತ್ತವಾಗಿ ಬೆಳೆಯಲಿ ಎಂದು ಹಾರೈಸಿದರು.

ರಾಜ್ಯ ಡ್ರೈವಿಂಗ್ ಶಾಲೆಗಳ ಒಕ್ಕೂಟದ ಉಪಾಧ್ಯಕ್ಷ ಎಲ್ಲಪ್ಪ ದೊಡ್ಡಮನಿ ಮಾತನಾಡಿ, ವಾಹನ ತರಬೇತಿ ಕ್ಷೇತ್ರದಲ್ಲಿ ಭಾರತ ವಾಹನ ತರಬೇತಿ ಶಾಲೆಯು ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ರಾಜ್ಯದ ಎಲ್ಲ ವಾಹನ ತರಬೇತಿ ಶಾಲೆಗಳ ಮಾಲೀಕರಿಗೆ ಈ ಸಂಸ್ಥೆಯು ಪ್ರೇರಣೆ ಮತ್ತು ಮಾದರಿಯಾಗಿದೆ. ಸಂಸ್ಥೆಯ ಮಾರ್ಗದರ್ಶನದಲ್ಲಿ ಚಾಲಕರಿಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಶಿಸ್ತು ಮತ್ತು ಜವಾಬ್ದಾರಿಯುತ ಚಾಲನಾ ಗುಣಗಳನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು.

ವಾಹನ ತರಬೇತಿ ಶಾಲೆಗಳು ಕೇವಲ ಚಾಲನಾ ತರಬೇತಿ ನೀಡಿ ಪರವಾನಗಿ ಪಡೆಯಲು ಸಹಕರಿಸುವುದಕ್ಕೆ ಸೀಮಿತವಾಗಬಾರದು. ಸಮಾಜಕ್ಕೆ ಶಿಸ್ತುಬದ್ಧ, ಜವಾಬ್ದಾರಿಯುತ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸುವ ಚಾಲಕರನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ತರಬೇತಿ ಪಡೆದು ಚಾಲನಾ ಪರವಾನಗಿ ಪಡೆದ ನಂತರವೂ ಪ್ರತಿಯೊಬ್ಬ ಚಾಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾ, ಸದಾ ಎಚ್ಚರಿಕೆಯಿಂದ ವಾಹನ ಚಲಾಯಿಸುವುದನ್ನು ಮರೆಯಬಾರದು ಎಂದು ಹೇಳಿದರು.

ವಾಹನಗಳ ಬ್ರೇಕ್‌, ಟೈರ್‌, ದೀಪಗಳು, ಎಂಜಿನ್‌ ಸೇರಿದಂತೆ ಪ್ರಮುಖ ಬಿಡಿಭಾಗಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಾಹನದಲ್ಲಿ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣ ದುರಸ್ತಿ ಮಾಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ವಾಹನ ನಿರ್ವಹಣೆ ಮಾಡುವುದರಿಂದ ಅಪಘಾತಗಳ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ ವಾಹನಗಳ ಕಾರ್ಯಕ್ಷಮತೆಯನ್ನೂ ಹೆಚ್ಚಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇಶಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಾದ ಕರ್ನಲ್ ಮಾರುತಿ ಕಜ್ಜರಿ, ಸುಬೇದಾರ್ ಬಸವರಾಜ ಕಡ್ಲಿ, ಅನಂತ ಪರಬ, ಪರಶುರಾಮ ದೇಸಾಯಿ, ಎಲ್ಲಪ್ಪ ಪಂಚಗಾವಿ, ಮನೋಹರ ಪಾಟೀಲ ಹಾಗೂ ಮಹಮ್ಮದಗೌಸ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭಾರತ ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಬಸವರಾಜ ಕಡ್ಲಿ, ಜಯ ಭಾರತ ವಾಹನ ತರಬೇತಿ ಶಾಲೆಯ ಪ್ರಾಂಶುಪಾಲ ಅಜಯಕುಮಾರ ಕಡ್ಲಿ, ನ್ಯೂ ಭಾರತ ವಾಹನ ತರಬೇತಿ ಶಾಲೆಯ ಪ್ರಾಂಶುಪಾಲ ಶ್ರೀಶೈಲ ಥಕ್ಕಣ್ಣವರ ಉಪಸ್ಥಿತರಿದ್ದರು. ಹೇಮಾ ಪಾಟೀಲ ನಿರೂಪಿಸಿದರು. ಬಸವರಾಜ ಸೊಪ್ಪಿಮಠ ವಂದಿಸಿದರು.********************************

Leave a Reply

Your email address will not be published. Required fields are marked *

Back to top button