*ಸಾರ್ವಜನಿಕ ಸ್ಮಶಾನ ಭೂಮಿ ಗುರುತಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ*

*ಎಸ್.ಸಿ-ಎಸ್.ಟಿ ಜಿಲ್ಲಾ ಜಾಗೃತಿ (ದೌರ್ಜನ್ಯ ನಿಯಂತ್ರಣ) ಮತ್ತು ಉಸ್ತುವಾರಿ ಸಮಿತಿ ಸಭೆ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಸೆ.30 : ಸಾರ್ವಜನಿಕ ಸ್ಮಶಾನ ಭೂಮಿ ಒದಗಿಸುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ಕನಿಷ್ಠ ಎರಡು ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.30) ನಡೆದ ಎಸ್.ಸಿ-ಎಸ್.ಟಿ ಜಿಲ್ಲಾ ಜಾಗೃತಿ (ದೌರ್ಜನ್ಯ ನಿಯಂತ್ರಣ) ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಕನಿಷ್ಠ ಎರಡು ಎಕರೆ ಭೂಮಿ ಅಗತ್ಯವಿದೆ. ಆದ್ದರಿಂದ ಉಪವಿಭಾಗಾಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು ಲಭ್ಯವಿರುವ ಸರ್ಕಾರಿ ಭೂಮಿಯನ್ನು ಪರಿಶೀಲಿಸಿ, ಸೂಕ್ತ ಸ್ಥಳವನ್ನು ಗುರುತಿಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಗಣಿಗಾರಿಕೆಯಲ್ಲಿ ಅವಕಾಶ ಕಲ್ಪಿಸಲು ಕ್ರಮ;
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಗಣಿಗಾರಿಕೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸೂಕ್ತ ಅವಕಾಶಗಳು ದೊರೆಯುತ್ತಿಲ್ಲ ಎಂಬ ವಿಚಾರವನ್ನು ಪರಿಶೀಲಿಸಿ, ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟರ ಭೂಮಿ ಕಬಳಿಸಿರುವ ಪ್ರಕರಣಗಳಲ್ಲಿ ಸಂಬಂಧಿಸಿದ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿರುವ ಇಂತಹ ಪ್ರಕರಣಗಳನ್ನು ಗುರುತಿಸಿ, ಅವುಗಳಿಗೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸುವುದರ ಜೊತೆಗೆ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾಮಾಜಿಕ ಜಾಲತಾಣದ ದೂರುಗಳ ಪರಿಶೀಲನೆ ಅಗತ್ಯ;
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಜೀವ ಬೆದರಿಕೆ ಸೇರಿದಂತೆ ವಿವಿಧ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು. ದೂರು ಅಥವಾ ಬೆದರಿಕೆಯ ಹಿಂದಿನ ಉದ್ದೇಶವೇನು, ಅದರಲ್ಲಿ ಮಾಡಲಾಗಿರುವ ಆರೋಪಗಳ ಸತ್ಯಾಸತ್ಯತೆ ಏನು ಹಾಗೂ ಪ್ರಕರಣವು ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಂದ ಪ್ರೇರಿತವಾಗಿದೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಸೂಕ್ತ ಕಾನೂನು ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಸಾರ್ವಜನಿಕರ ಪರವಾಗಿದ್ದು, ಸಾರ್ವಜನಿಕರು ಯಾವುದೇ ಸಮಸ್ಯೆ ಎದುರಾದ ಸಂದರ್ಭದಲ್ಲಿ ಇಲಾಖೆಯ ಸಹಕಾರ ಪಡೆದು ಪೊಲೀಸ್ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಬಂಧನ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಸುಳ್ಳು ಪ್ರಕರಣಗಳಿಂದ ಅನಗತ್ಯವಾಗಿ ಸಮಾಜದ ಸ್ವಾಸ್ಥ್ಯ ಹದಗೆಡುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.
ಪ್ರಕರಣದ ಹಿನ್ನೆಲೆ ಪರಿಶೀಲಿಸಿ ಕ್ರಮ:
ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಮಾತನಾಡಿ, ಯಾವುದೇ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಮುನ್ನ ಪ್ರಕರಣಗಳ ಹಿಂದಿರುವ ಉದ್ದೇಶ ಹಾಗೂ ಸಂಪೂರ್ಣ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಪ್ರಕರಣವು ರಾಜಕೀಯ ಪ್ರೇರಿತವಾಗಿದೆಯೇ ಅಥವಾ ವೈಯಕ್ತಿಕ ಕಾರಣಗಳಿಂದ ಉಂಟಾಗಿದೆಯೇ ಎಂಬುದರ ಜೊತೆಗೆ, ಸಂಬಂಧಿತ ವ್ಯಕ್ತಿಗಳ ಪರಿಸ್ಥಿತಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ ಸಮಿತಿಯ ನಾಮ ನಿರ್ದೇಶತ ಸದಸ್ಯ ಕರೆಪ್ಪ ಗುಡೆನ್ನವರ, ಬಸವರಾಜ ಆಯುಟ್ಟಿ, ವಿಜಯ ತಳವಾರ, ಸಮಾಜದ ಮುಖಂಡ ಮಲ್ಲೇಶ ಚೌಗಲಾ ಸೇರಿಯಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.********************************











