*RCUನಲ್ಲಿ ₹32 ಲಕ್ಷ PF–ಪಿಂಚಣಿ ಹಣ ಅಕ್ರಮ ವರ್ಗಾವಣೆ ಆರೋಪ*

*ನಾಲ್ವರ ವಿರುದ್ಧ ಪ್ರಕರಣ; ಮೂವರು ಬಂಧನ ಇನ್ನಷ್ಟು ಅವ್ಯವಹಾರದ ಶಂಕೆ, ತನಿಖೆ ಮುಂದುವರಿಕೆ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿಯ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ (RCU) ಭವಿಷ್ಯ ನಿಧಿ (PF) ಹಾಗೂ ಪಿಂಚಣಿ ಮೊತ್ತಕ್ಕೆ ಸಂಬಂಧಿಸಿದಂತೆ ₹32.01 ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
2020ರಿಂದ 2023ರವರೆಗೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿರುವ ಈ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಹಣಕಾಸು ವಿಭಾಗಕ್ಕೆ ಸಂಬಂಧಿಸಿದ ಮುರಿಗೇಶ ಎಚ್.ಎಂ., ಮಹೇಶ್ ವೀರೇಶ್ ವಾಲಿ, ಸಂದೀಪ್ ಬುರ್ಲಿ ಹಾಗೂ ರಾಮು ಯಮನಪ್ಪ ಹಂಚಿನಾಳ ಎಂಬುವರ ವಿರುದ್ಧ ಆರೋಪ ಮಾಡಲಾಗಿದೆ.
ವಿಶ್ವವಿದ್ಯಾಲಯದ ಸಿಬ್ಬಂದಿಗೆ ಸಂಬಂಧಿಸಿದ PF ಹಾಗೂ ಪಿಂಚಣಿ ಹಣವನ್ನು ಸಂಬಂಧಪಟ್ಟ ಫಲಾನುಭವಿಗಳಿಗೆ ಪಾವತಿಸುವ ಬದಲು, ಆರೋಪಿತರು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಒಟ್ಟು ₹32,01,546 ಹಣದ ಅಕ್ರಮ ವರ್ಗಾವಣೆಯಾಗಿದೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ. ದರಿಖಾನ್ ಕೃಷ್ಣದೇವ ಕಾಂಬಳೆ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತರು ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು, ಪೊಲೀಸರು ವಿವಿಧ ಜಿಲ್ಲೆಗಳಲ್ಲಿ ಶೋಧ ನಡೆಸಿ ಮುರಿಗೇಶ ಎಚ್.ಎಂ., ಮಹೇಶ್ ವೀರೇಶ್ ವಾಲಿ ಹಾಗೂ ಸಂದೀಪ್ ಬುರ್ಲಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣದಲ್ಲಿ ರಾಮು ಯಮನಪ್ಪ ಹಂಚಿನಾಳ ಅವರ ಬಂಧನದ ಸ್ಥಿತಿ ಸೇರಿದಂತೆ ತನಿಖೆಯ ಮುಂದಿನ ಬೆಳವಣಿಗೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಸ್ಪಷ್ಟ ಮಾಹಿತಿ ನಿರೀಕ್ಷಿಸಲಾಗಿದೆ.
ಇನ್ನೂ ಎಷ್ಟು ಹಣ? ಈ ಪ್ರಕರಣದಲ್ಲಿ ದಾಖಲಾಗಿರುವ ₹32.01 ಲಕ್ಷದ ಮೊತ್ತದ ಹೊರತಾಗಿ, ಇದೇ ರೀತಿಯಲ್ಲಿ ಇನ್ನಷ್ಟು ಹಣ ಅಕ್ರಮವಾಗಿ ವರ್ಗಾವಣೆಯಾಗಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. PF, ಪಿಂಚಣಿ ಹಾಗೂ ಇತರೆ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಒಟ್ಟು ಅವ್ಯವಹಾರದ ಪ್ರಮಾಣ ಸ್ಪಷ್ಟವಾಗಲಿದೆ.
RCUನಂತಹ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಿಬ್ಬಂದಿಯ PF ಮತ್ತು ಪಿಂಚಣಿ ಹಣಕ್ಕೆ ಸಂಬಂಧಿಸಿದಂತೆ ಇಂತಹ ಆರೋಪಗಳು ಕೇಳಿಬಂದಿರುವುದು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರಬೇಕಿದೆ.*******************************






