*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳು ಹಾಗೂ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನ ಪಡೆದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ವಿವಿಧೆಡೆ ಆಯೋಜಿಸಲಾಗಿರುವ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು, ವಿಘ್ನ ವಿನಾಶಕ ಶ್ರೀ ಗಣೇಶನಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದರು.
ಅಂಬೇವಾಡಿಯಲ್ಲಿ ಗಣೇಶೋತ್ಸವದ ಸಂಭ್ರಮ
ಅಂಬೇವಾಡಿ ಗ್ರಾಮದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಮಕ್ಕಳು ಪ್ರದರ್ಶಿಸಿದ ವಿವಿಧ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಅವರು, ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.
ಕಂಗ್ರಾಳಿ ಬಿಕೆ, ಗಣೇಶಪುರ, ಬಿಜಗರಣಿಯಲ್ಲೂ ದರ್ಶನ
ಕಂಗ್ರಾಳಿ ಬಿಕೆ ಗ್ರಾಮದ ಶ್ರೀ ಗಣೇಶ್ ಲೇಔಟ್ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಗಣೇಶಪುರದ ಶ್ರೀ ಲಕ್ಷ್ಮೀ ನಗರ–ನೀಲಕಂಠ ವಿಹಾರದಲ್ಲಿರುವ ಗಣೇಶೋತ್ಸವ ಮಂಡಳಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆದ ಅವರು, ಕ್ಷೇತ್ರದ ಜನತೆಯ ಒಳಿತಿಗಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.
ಬಿಜಗರಣಿ ಗ್ರಾಮದಲ್ಲಿ ಶ್ರೀ ವಿಕಾಸ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಅವರು, ಗ್ರಾಮಸ್ಥರಿಗೆ ಗಣೇಶೋತ್ಸವದ ಶುಭಾಶಯಗಳನ್ನು ತಿಳಿಸಿದರು.
ವಿವಿಧ ಬಡಾವಣೆಗಳಲ್ಲೂ ಗಣೇಶೋತ್ಸವದಲ್ಲಿ ಭಾಗಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಓಂಕಾರ್ ನಗರ, ಟೀಚರ್ಸ್ ಕಾಲೋನಿ, ಶಿವನಗರ, ಸಂಕಲ್ಪ ಲೇಔಟ್, ಕೆ.ಎಚ್.ಬಿ. ಸೊಸೈಟಿ ಹಾಗೂ ಆಜಾದ್ ಸೊಸೈಟಿ ವ್ಯಾಪ್ತಿಯಲ್ಲಿ ಸ್ವಯಂಭು ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶ ಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಘ್ನನಿವಾರಕ ಶ್ರೀ ಗಣಪತಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಬೆನಕನಹಳ್ಳಿಯಲ್ಲಿ ಮಹಾಪ್ರಸಾದ ಸೇವೆಗೆ ಚಾಲನೆ
ಬೆನಕನಹಳ್ಳಿ ಗ್ರಾಮದ ವಿವಿಧ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು ಭವ್ಯ ಗಣೇಶ ಮೂರ್ತಿಗಳ ದರ್ಶನ ಪಡೆದರು.
ಗ್ರಾಮದ ವಿವಿಧೆಡೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ಕಂಡುಬಂದ ಭಕ್ತಿ, ಶ್ರದ್ಧೆ ಹಾಗೂ ಉತ್ಸಾಹದ ವಾತಾವರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಮಹಾಪ್ರಸಾದ ಸೇವೆಗೆ ಚಾಲನೆ ನೀಡಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.
ಸುಳಗಾ (ಯು) ಗ್ರಾಮದಲ್ಲಿ ಭಕ್ತಿಯ ವಾತಾವರಣ
ಸುಳಗಾ (ಯು) ಗ್ರಾಮದ ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನವನ್ನೂ ಲಕ್ಷ್ಮೀ ಹೆಬ್ಬಾಳಕರ್ ಪಡೆದರು.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಕಂಡುಬಂದ ಭಕ್ತಿ, ಉತ್ಸಾಹ ಹಾಗೂ ಶ್ರದ್ಧೆಯ ವಾತಾವರಣದಲ್ಲಿ ಪಾಲ್ಗೊಂಡ ಅವರು, ವಿಘ್ನ ವಿನಾಶಕ ಮಹಾಗಣಪತಿಯು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಗೂ ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಆಯುರಾರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗಿ
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಜಯವಂತ ಬಾಳೇಕುಂದ್ರಿ, ಲಕ್ಷ್ಮೀ ಯಳ್ಳೂರಕರ್, ಪುಂಡಲೀಕ್ ಬಾಂದುರ್ಗೆ, ಶಿವಾಜಿ ರಕ್ಷೆ, ಅಮುಲ್ ಭಾತ್ಕಂಡೆ, ಬಾಹುರಾವ್ ತುಡವೇಕರ್, ಯೋಗೇಶ್ ರಕ್ಷೆ, ವಿಕ್ರಂ ತರಳೆ, ಶಿವಾಜಿ ಕಾಂಬಳೆ, ಮಲ್ಲಪ್ಪ ತರಳೆ, ದತ್ತಾ ಠಾಕ್ರೆ, ಮೋಹನ್ ಸಾಂಬ್ರೇಕರ್, ಎಸ್. ಪಾಟೀಲ್, ಮಹಾದೇವ್ ಪೊದಾರ್, ಚಂದ್ರಶೇಖರ್ ಶಿರಹಟ್ಟಿ, ಚಂದ್ರಕಾಂತ ಕಡಗೆ, ಸಾಗರ್ ಗೊಡಸೆ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.*******************************











