*ಹೈಕಮಾಂಡ್ʼ ನಡೆಗೆ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಬೆನ್ನಲ್ಲೇ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ಹಾಕಿರುವ ಕಂಡೀಷನ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಬೇಡಿಕೆಯೇನು? ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗಲು ಒಪ್ಪಿದ್ದಾರೆ. ಆದರೆ ಅವರ ಮುಂದೆ ಒಂದು ಪ್ರಬಲ ಬೇಡಿಕೆಯಿದೆ. ಅದೇನೆಂದರೆ, ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ. ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಉಪಮುಖ್ಯಮಂತ್ರಿಯಾಗಿಯೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ ಮಾದರಿಯಲ್ಲೇ ತಮಗೂ ಅವಕಾಶ ನೀಡಬೇಕು ಎಂಬುದು ಸತೀಶ್ ಅವರ ವಾದ.
ಹೈಕಮಾಂಡ್ ಹೇಳುತ್ತಿರುವುದೇನು? ಜಾರಕಿಹೊಳಿ ಅವರ ಈ ಬೇಡಿಕೆಗೆ ಹೈಕಮಾಂಡ್ ಸದ್ಯಕ್ಕೆ ‘ನಕಾರ’ ಎನ್ನತ್ತಿದೆ ಎನ್ನಲಾಗಿದೆ.
ಪಕ್ಷವನ್ನು ಮುನ್ನಡೆಸಲು ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ನಿಭಾಯಿಸಿ ಎಂದು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎಂಬ ನಿಯಮವನ್ನು ಹೈಕಮಾಂಡ್ ಸತೀಶ್ ಮುಂದೆ ಇಟ್ಟಿದೆ.
ಡಿಕೆಶಿಗೆ ಒಂದು ನ್ಯಾಯ, ನನಗೊಂದು ನ್ಯಾಯವೇ? ಹೈಕಮಾಂಡ್ನ ಈ ನಿಲುವಿನಿಂದ ಸತೀಶ್ ಜಾರಕಿಹೊಳಿ ತೀವ್ರ ಬೇಸರಗೊಂಡಿದ್ದಾರೆ. ಸರ್ಕಾರ ರಚನೆಯಾದಾಗ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನೂ ನೀಡಲಾಗಿತ್ತು. ಅವರಿಗೆ ಸಿಕ್ಕ ವಿನಾಯಿತಿ ನನಗೇಕೆ ಇಲ್ಲ? ಎಂಬುದು ಸತೀಶ್ ಜಾರಕಿಹೊಳಿ ಅವರ ಆಪ್ತರ ಪ್ರಶ್ನೆ. ಈ ತಾರತಮ್ಯದ ಧೋರಣೆಯಿಂದಾಗಿ ಅವರು ಹೈಕಮಾಂಡ್ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ಸತೀಶ್ ಜಾರಕಿಹೊಳಿ ಅವರು ಅಹಿಂದ ವರ್ಗದ ಪ್ರಭಾವಿ ನಾಯಕರಾಗಿದ್ದು, ಅವರನ್ನು ಕಡೆಗಣಿಸುವುದು ಹೈಕಮಾಂಡ್ಗೆ ಅಷ್ಟು ಸುಲಭವಲ್ಲ. ಒಂದು ವೇಳೆ ಸತೀಶ್ ಅವರು ಸಚಿವ ಸ್ಥಾನ ಬಿಡಲು ಒಪ್ಪದಿದ್ದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಪಕ್ಷಕ್ಕೆ ಎದುರಾಗಲಿದೆ. ಒಟ್ಟಿನಲ್ಲಿ, ಸಿಎಂ ರಾಜೀನಾಮೆ ಮತ್ತು ಹೊಸ ನಾಯಕತ್ವದ ಆಯ್ಕೆಯ ಈ ಸಂಕಷ್ಟದ ಸಮಯದಲ್ಲಿ ಸತೀಶ್ ಜಾರಕಿಹೊಳಿ ಅವರ ಈ ಬೇಡಿಕೆ ಮತ್ತು ಅಸಮಾಧಾನ ಕಾಂಗ್ರೆಸ್ ಪಾಳಯದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.**********************************






