ಪತ್ನಿ ಮನೆಯಲ್ಲಿದ್ದಾಗಲೇ ನೇಣಿಗೆ ಶರಣು – ಬೆಳಗಾವಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ..!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜ್ಯ ಮೀಸಲು ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಶೈಲ ಚೌಗಲೆ (37) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ ಚನ್ನಮ್ಮ ನಗರದಲ್ಲಿ ನಡೆದಿದೆ.
ಪತ್ನಿ ಮನೆಯಲ್ಲಿದ್ದಾಗಲೇ ರೂಮ್ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅನುಮಾನಗೊಂಡ ಪತ್ನಿ ತಕ್ಷಣವೇ ಮೀಸಲು ಪಡೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಧೀನ ಸಿಬ್ಬಂದಿ ರೂಮ್ ಬಾಗಿಲು ಮುರಿದು ಶ್ರೀಶೈಲ ಚೌಗಲೆ ಅವರನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಪ್ರಸ್ತುತ ಬೆಳಗಾವಿ ಹೊರವಲಯದ ಕಂಗ್ರಾಳಿ ಪಿಟಿಎಸ್‌ನಲ್ಲಿ ಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ ಚೌಗಲೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೃತದೇಹವನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಬೆಳಗಾವಿ ಉದ್ಯಮಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.********************************






