ಪ್ರಕೃತಿ ಬೆಳಗಾವಿ

*ಇಂಗ್ಲಿಷ್ ಬೋರ್ಡ್ ತೆರವು; ಕನ್ನಡಕ್ಕೆ ಆದ್ಯತೆ ನೀಡಬೇಕು: ಕರ್ನಾಟಕ ರಕ್ಷಣಾ ಟೈಗರ್ಸ್ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಡಾ. ಪ್ರಭಾಕರ್ ಕೋರೆ ಅವರ ಆಡಳಿತಾತ್ಮಕ ಸಂಸ್ಥೆಗಳ ಸಮೀಪ ಅಳವಡಿಸಲಾಗಿದ್ದ ಕೆಲವು ಇಂಗ್ಲಿಷ್ ಬೋರ್ಡ್‌ಗಳನ್ನು ಗಮನಿಸಿದ ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ ಅವರು ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ವಿಷಯ ತಂದರು.

ದೂರು ಸ್ವೀಕರಿಸಿದ ಮಹಾನಗರ ಪಾಲಿಕೆ ಸಿಬ್ಬಂದಿ, “ಈ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲ. ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು. ಅಧಿಕಾರಿಗಳ ಮನವಿಯಂತೆ ಬಾಳಪ್ಪ ಗುಡಗೇನಟ್ಟಿ ಅವರು ಸ್ಥಳದಲ್ಲೇ ಕಾಯುತ್ತಿದ್ದರೆ, ಬಳಿಕ ಆಗಮಿಸಿದ ಪಾಲಿಕೆ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಮಾತ್ರ ಅಳವಡಿಸಲಾಗಿದ್ದ ಬೋರ್ಡ್‌ಗಳನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಳಪ್ಪ ಗುಡಗೇನಟ್ಟಿ, “ಬೆಳಗಾವಿಯಲ್ಲಿ ಕನ್ನಡ ಭಾಷೆಗೆ ಕಡ್ಡಾಯ ಆದ್ಯತೆ ನೀಡುವ ನಿಯಮಗಳಿದ್ದರೂ, ಕೆಲವು ದೊಡ್ಡ ಸಂಸ್ಥೆಗಳ ಎದುರು ಇನ್ನೂ ಇಂಗ್ಲಿಷ್ ಬೋರ್ಡ್‌ಗಳು ಹೆಚ್ಚಾಗಿ ಕಾಣಿಸುತ್ತಿವೆ. ಇದು ಕನ್ನಡ ಭಾಷೆಯ ಗೌರವಕ್ಕೆ ಧಕ್ಕೆಯಾಗುವ ಸಂಗತಿಯಾಗಿದೆ. ವಿಶೇಷವಾಗಿ ಡಾ. ಪ್ರಭಾಕರ್ ಕೋರೆ ಅವರ ಸಂಸ್ಥೆಗಳ ಎದುರು ಇಂತಹ ಬೋರ್ಡ್‌ಗಳು ಕಂಡುಬರುತ್ತಿರುವುದನ್ನು ಪ್ರತಿನಿತ್ಯ ಸಾರ್ವಜನಿಕರು ಗಮನಿಸುತ್ತಿದ್ದಾರೆ” ಎಂದು ಹೇಳಿದರು.

ಅಲ್ಲದೆ, ಆ ಸಂಸ್ಥೆಗಳ ಎದುರು ಸೂಕ್ತ ಟ್ರಾಫಿಕ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ನಿತ್ಯ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ ಅವರು, “ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಗದಂತೆ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.

“ದೊಡ್ಡವರಿಗೊಂದು ನ್ಯಾಯ, ಚಿಕ್ಕವರಿಗೊಂದು ನ್ಯಾಯ ಎಂಬ ಪರಿಸ್ಥಿತಿ ಬೆಳಗಾವಿಯಲ್ಲಿ ಇರಬಾರದು. ಕನ್ನಡ ನಾಡಿನ ಗೌರವವನ್ನು ಕಾಪಾಡುವ ಜವಾಬ್ದಾರಿ ಎಲ್ಲರದ್ದೂ ಆಗಿದೆ. ಅಧಿಕಾರಿಗಳು ಸೂಚನೆ ನೀಡಿದ ನಂತರ ಕ್ರಮ ಕೈಗೊಳ್ಳುವ ಬದಲು, ನಿಯಮಗಳನ್ನು ತಿಳಿದವರು ತಾವೇ ಸ್ವಯಂಪ್ರೇರಿತವಾಗಿ ಪಾಲಿಸಿದರೆ ಅದು ಉತ್ತಮ ಬೆಳವಣಿಗೆಯಾಗುತ್ತದೆ. ಸಮಾಜಕ್ಕೆ ಮಾದರಿಯಾಗಬೇಕಾದವರು ಮೊದಲು ನಿಯಮಗಳನ್ನು ಪಾಲಿಸಬೇಕು” ಎಂದು ಬಾಳಪ್ಪ ಗುಡಗೇನಟ್ಟಿ ಅಭಿಪ್ರಾಯಪಟ್ಟರು.***************************

Leave a Reply

Your email address will not be published. Required fields are marked *

Back to top button