ಉತ್ತಮ ಪರಿಸರವೇ ನಾವು ಭವಿಷ್ಯಕ್ಕೆ ನೀಡಬಹುದಾದ ಅತ್ಯಮೂಲ್ಯ ಆಸ್ತಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಲು ರಾಜ್ಯವ್ಯಾಪಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಡಳಿಯ ಆಶಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಯುವಪೀಳಿಗೆಯ ಮೇಲೆ ಪರಿಸರ ಸಂರಕ್ಷಣೆಯ ಮಹತ್ತರವಾದ ಜವಾಬ್ದಾರಿಯಿದೆ.
ಶ್ರೀಮತಿ ಇಂದಿರಾ ಗಾಂಧಿಯವರು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅನೇಕ ಕಾಯ್ದೆ ಹಾಗೂ ಕಾನೂನುಗಳನ್ನು ಜಾರಿಗೆ ತಂದು ಅಂದಿನ ಕಾಲಘಟ್ಟದಲ್ಲೇ ಪರಿಸರ ಸಂರಕ್ಷಣೆಗೆ ಸುಭದ್ರ ಅಡಿಪಾಯ ಹಾಕಿದರು.
35 ಸಕ್ಕರೆ ಕಾರ್ಖಾನೆಗಳು, 4 ಸಿಮೆಂಟ್ ಫ್ಯಾಕ್ಟರಿಗಳು, 250 ಕ್ರಷರ್ಗಳು, 65 ಆಸ್ಪತ್ರೆಗಳು ಸೇರಿ 1041 ವಿವಿಧ ಉದ್ದಿಮೆಗಳು ಬೆಳಗಾವಿಯಲ್ಲಿದೆ. ಇವುಗಳಿಂದ ಹೊರಸೂಸುತ್ತಿರುವ ತ್ಯಾಜ್ಯಗಳನ್ನು ಪರ್ಯಾಯ ಸಂಪನ್ಮೂಲಗಳಾಗಿ ಬಳಸಿಕೊಳ್ಳುವುದರ ಮೂಲಕ ಹೆಚ್ಚಿನ ಪರಿಸರ ಹಾನಿಯನ್ನು ತಡೆಗಟ್ಟಬಹುದಾಗಿದೆ.
ನಗರ ಪ್ರದೇಶಗಳು ಬೆಳೆದಂತೆ ಜಲ ಮಾಲಿನ್ಯ ಕೂಡಾ ಹೆಚ್ಚಾಗುತ್ತಿದೆ. ಮಲಪ್ರಭಾ ಹಾಗೂ ಕೃಷ್ಣ ನದಿಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಅತ್ಯಂತ ಮಲಿನ ನದಿಗಳೆಂದು ಘೋಷಿಸಿತ್ತು. ಇದೀಗ ಸ್ಥಳೀಯ ಸಂಸ್ಥೆಗಳ ಪರಿಶ್ರಮದಿಂದ ಈ ನದಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬುವುದು ಸಂತಸದ ವಿಚಾರ. ಈ ನದಿಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಕಾರ್ಖಾನೆಗಳು ಪರಿಸರಕ್ಕೆ ಮಾರಕವಾಗುವ ಚಟುವಟಿಕೆಗಳನ್ನು ಮಾಡಿದಲ್ಲಿ ಮಂಡಳಿಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ.
ಸೌರ ವಿದ್ಯುತ್, ಪವನ ವಿದ್ಯುತ್ ಹಾಗೂ ಸಾರ್ವಜನಿಕ ಸಾರಿಗೆಗಳು ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ನಮ್ಮ ಸಣ್ಣ ಸಣ್ಣ ಹೆಜ್ಜೆಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಬಹುದೊಡ್ಡ ಮಾದರಿಯಾಗಬಲ್ಲದು.
ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ 11ನೇ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರೊಂದಿಗೆ ಭಾಗಿಯಾಗಿ ಮಾತನಾಡಿದೆನು.*******************************






