ಪ್ರಕೃತಿ ಬೆಳಗಾವಿ

2011 ರಿಂದ ನಿವೃತ್ತಿ ವೇತನ ಜಾರಿ ಮಾಡಲು ಒತ್ತಾಯಿಸಿ ಅಂಗನವಾಡಿ ನೌಕರರಿಂದ ಪ್ರತಿಭಟನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಮದುರ್ಗ : ಸಮಗ್ರ ಬಾಲ ವಿಕಾಸ ಯೋಜನೆಯಡಿಯಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ನಿವೃತ್ತಿ ವೇತನ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ಅನ್ವಯ 2011 ರಿಂದ 2023 ಏಪ್ರೀಲ್ ತನಕ 1972ರ ಕಾಯಿದೆ ಪ್ರಕಾರ ನಿವೃತ್ತಿಯಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧಾನ ನೀಡಬೇಕೆಂದು ಕಾರ್ಮಿಕ ಮುಖಂಡ ಜಿ.ಎಮ್.ಜೈನೆಖಾನ್ ಸರ್ಕಾರಕ್ಕೆ ಒತ್ತಾಯಿಸಿದರು.

ಸುಪ್ರೀಂ ಕೋರ್ಟಿನ ಆದೇಶದ ಭಾಗವಾಗಿ ಎಲ್ಲ ಅಂಗನವಾಡಿ ನೌಕರರಿಗೆ ನಿವೃತ್ತಿ ಉಪಧಾನ ನೀಡಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆಯ ಅಂಗವಾಗಿ ತಹಶೀಲ್ದಾರ ಕಚೇರಿ ಎದುರು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಅರ್ಪಿಸಿದರು.

ಸುಪ್ರೀಂ ಕೋರ್ಟ್‌ ಆದೇಶದ ಭಾಗವಾಗಿ ಹಿಂದಿನ ಸರ್ಕಾರ 02-02-2023 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆದೇಶ ಮಾಡಿಸಿ 2023 ಏಪ್ರಿಲ್ ನಿಂದ ನಿವೃತ್ತಿಯಾಗಿರುವ ಎಲ್ಲ ನೌಕರರಿಗೆ ನಿವೃತ್ತಿ ಉಪಧಾನ ಜಾರಿಗೆ ಬರುವಂತೆ ಆದೇಶ ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ 2011 ರಿಂದ ನಿವೃತ್ತಿ ಉಪಧಾನ ನೀಡಬೇಕೆಂದು ಆದೇಶ ಮಾಡಿದ್ದು, ರಾಜ್ಯದಲ್ಲಿ 10311 ಜನ ಅಂಗನವಾಡಿ ಕಾರ್ಯಕರ್ತೆಯರು, 11980 ಅಂಗನವಾಡಿ ಸಹಾಯಕಿಯರು ನಿವೃತ್ತಿಯಾಗಿದ್ದಾರೆ.

ಇವರಿಗೆ ನಿವೃತ್ತಿ ಉಪಧಾನ ನೀಡಲು ರೂ.183 ಕೋಟಿ ಬೇಕಾಗುತ್ತದೆ. ಈ ಕುರಿತು ಕಡತ್‌ನ್ನು ಆರ್ಥಿಕ ಇಲಾಖೆಗೆ ಕಳಿಸಲಾಗಿದೆ. ಆದರೆ ಆರ್ಥಿಕ ಇಲಾಖೆಯವರು ಇನ್ನೂವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆರ್ಥಿಕ ಇಲಾಖೆಯನ್ನು ತಮ್ಮ ಬಳಿ ಇಟ್ಟುಕೊಂಡ ಸನ್ಮಾನ್ಯ ಮುಖ್ಯಮಂತ್ರಿಗಳು ಬರುವ ಬಜೆಟ್‌ನಲ್ಲಿ ರೂ.183 ಕೋಟಿ ನಿವೃತ್ತಿ ಉಪಧಾನಕ್ಕೆ ಘೋಷಣೆ ಮಾಡಿ 20-25 ವರ್ಷ ಸೇವೆ ಸಲ್ಲಿಸಿದ ಬಡ ಅಂಗನವಾಡಿ ನೌಕರರಿಗೆ ಸಹಾಯ ಮಾಡಬೇಕೆಂದು ಜೈನೆಖಾನ್ ಒತ್ತಾಯಿಸಿದರು. ಅಂಗನವಾಡಿ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿ ವಂದಿಸಿದರು.

ಪ್ರತಿಭಟನಾ ಕಾರ್ಯಕ್ರಮದಲ್ಲಿ ತಾಹೀರಾ ಮಕಾನದಾರ, ಶಕುಂತಲಾ ನಾರಾಯಣಕರ, ಬೋರವ್ವ ತೆಕ್ಕಿ. ವಿಜಯಲಕ್ಷ್ಮೀ ಸಿದ್ದಿಭಾವಿ, ರತ್ನಾ ಗುಗ್ಗಳ, ಸಾವಿತ್ರಿ ಹೊಸಮನಿ, ಶೈಲಾ ಕುಂಬಾರ, ಯಶೋಧಾ ಹೊಸಕೋಟಿ ಮುಂತಾದವರು ಉಪಸ್ಥಿತರಿದ್ದರು. ನಿವೃತ್ತಿಯಾಗಿರುವ ನೂರಾರು ಅಂಗನವಾಡಿ ನೌಕರರು ಭಾಗವಹಿಸಿದ್ದರು.******************************

Back to top button