ಪ್ರಕೃತಿ ಬೆಳಗಾವಿ

ಬಸವಣ್ಣನವರು ಕಟ್ಟ ಬಯಸಿದ ಆದರ್ಶ ಸಮಾಜ…!!

ಪ್ರಕೃತಿ ಬೆಳಗಾವಿ ಸುದ್ದಿ : ಬಸವಣ್ಣನವರು ಇಂದಿನ ಬಸವನಬಾಗೇವಾಡಿಯಲ್ಲಿ ಕ್ರಿ.ಶ. ೧೧೩೧ ರಲ್ಲಿ ಜನಿಸಿದರು. ( ತಾಯಿಯ ತವರು ಮನೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದನರು ಎಂದು ಹೇಳಲಾಗಿದೆ ) ತಂದೆಯ ಹೆಸರು ಮಾದಿರಾಜ, ತಾಯಿಯ ಹೆಸರು ಮಾದಾಂಬೆ. ಬಾಲ್ಯದಲ್ಲಿಯೇ ಬಸವಣ್ಣ ವೈದಿಕ ಸಂಪ್ರದಾಯದ ಆಚಾರಗಳ ವಿರೋಧಿಯಾಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಜನಿವಾರ ಧರಿಸುವುದು ಕೇವಲ ಪುರುಷರು ಎಂಬ ವಿಷಯ ತಿಳಿದು, ಈ ಅಸಮಾನತೆಯ ವಿರುದ್ಧ ಸಿಡಿದೆದ್ದು ಮನೆಯನ್ನು ತೊರೆದು ಕೂಡಲಸಂಗಮಕ್ಕೆ ಬರುತ್ತಾರೆ. ಅಲ್ಲಿ ೧೦ ರಿಂದ ೧೨ ವರ್ಷಗಳ ಕಾಲ ಸಂಪೂರ್ಣ ಅಧ್ಯಯನ ಮಾಡುತ್ತಾರೆ. ಮುಂದೆ ನೀಲಾಂಬಿಕೆ ಹಾಗೂ ಗಂಗಾಂಬಿಕೆ ಇಬ್ಬರನ್ನು ಬಸವಣ್ಣ ಮದುವೆಯಾಗುತ್ತಾರೆ.

ನಂತರ ಕಲ್ಯಾಣದ ಬಿಚ್ಚಳನ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿ ಕೆಲಸ ಮಾಡುತ್ತಾರೆ. ಬಸವಣ್ಣನವರನ್ನು ‘ಭಕ್ತಿ ಭಂಡಾರಿ’ ಎಂದು ಕರೆಯುತ್ತಾರೆ. ಅವರ ಪ್ರಮುಖ ಕಾಳಜಿ ಸಮಾಜ ಸುಧಾರಣೆಯಾಗಿತ್ತು. ಆಗಿನ ಕಾಲದಲ್ಲಿ ಆಚಾರದಲ್ಲಿದ್ದ ಜಾತಿ, ಮತ, ಪಂಥ, ಲಿಂಗ, ಬಡವ ಹಾಗೂ ಶ್ರೀಮಂತ ಇತ್ಯಾದಿ ಭೇದ-ಭಾವಗಳನ್ನು ತೊಡೆದು ಹಾಕುವುದು ಅವರ ಮುಖ್ಯ ಗುರಿಯಾಗಿತ್ತು. ಜನರಲ್ಲಿ ಮನೆ ಮಾಡಿರುವ ಅಜ್ಞಾನ, ಕಂದಾಚಾರ, ಮೂಢನಂಬಿಕೆ, ದೇವರ ಹೆಸರಿನಲ್ಲಿ ನಡೆಯುವ ಮೋಸ, ಬಹು ದೇವೋಪಾಸನೆ, ಪ್ರಾಣಿ ಬಲಿ ಇತ್ಯಾದಿಗಳನ್ನು ತಡೆಗಟ್ಟುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಕಲ್ಯಾಣದಲ್ಲಿ ಇರುವ ಎಲ್ಲ ಶಿವಶರಣರನ್ನು ಒಂದುಗೂಡಿಸಿ ವಚನ ರಚನೆಗಳ ಮೂಲಕ ಕ್ರಾಂತಿಯನ್ನು ಮಾಡಿದರು. ಪ್ರತಿಯೊಬ್ಬ ಶಿವಶರಣರಿಗೂ ಲಿಂಗ ದೀಕ್ಷೆ ನೀಡುವ ಮೂಲಕ ಲಿಂಗ ಪೂಜೆಯ ಹೊಸ ಕಲ್ಪನೆಯನ್ನು ನೀಡಿದರು. ಆಗಿನ ಕಾಲದಲ್ಲಿ ಕೆಳವರ್ಗದ ಜನರಿಗೆ ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ. ಹೀಗಾಗಿ ಲಿಂಗಪೂಜೆ ಎಲ್ಲರಿಗೂ ವರದಾನವಾಗಿ ಪರಿಣಮಿಸಿತು. ಕಲ್ಯಾಣದ ಮಹಾ ಮನೆಯಲ್ಲಿ ಎಲ್ಲ ವರ್ಗದ ವಚನಕಾರರು ಒಂದೆಡೆ ಸೇರಿ ಸಮಾಜದ ಪರಿವರ್ತನೆಗೆ ಬಹಳ ಶ್ರಮಿಸಿದರು.

ಬಸವಣ್ಣನವರು ‘ಕಾಯಕವೇ ಕೈಲಾಸ’ ವೆಂದು ಕಾಯಕದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ ಮಹಾಪುರುಷ. ಅವರು ಹೇಳಿದ ಈ ಮಾತು ಇಂದಿನ ನಿರುದ್ಯೋಗ ಸಮಸ್ಯೆಗೆ ರಾಮಬಾಣವಾಗಿದೆ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ. ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಎಂಬುದು ಬಹಳ ಪ್ರಸಿದ್ಧವಾದಂತಹ ವಚನ. ನಮ್ಮ ಅಂತರಂಗ ಹಾಗೂ ಬಹಿರಂಗ ಶುದ್ದಿಯನ್ನು ಹೇಗೆ ಮಾಡಿಕೊಳ್ಳಬಹುದೆಂದು ಬಸವಣ್ಣನವರು ಹೇಳುತ್ತಾರೆ. ಈ ವಚನವನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಪರಿಪೂರ್ಣ ಮನುಷ್ಯನಾಗಬಹುದು.
‘ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’

ಎಂದು ಹೇಳುತ್ತ ಎಲ್ಲರೂ ತಮ್ಮಷ್ಟಕ್ಕೆ ತಾವು ಒಳ್ಳೆಯವರಾದರೆ ಇಡೀ ಜಗತ್ತೇ ಒಳ್ಳೆಯದಾಗುತ್ತದೆ. ಬಸವಣ್ಣನವರು ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳನ್ನು ತಂದರು. ಸರಳಗನ್ನಡದಲ್ಲಿ ಎಲ್ಲರಿಗೂ ತಿಳಿಯುವಂತೆ ವಚನಗಳನ್ನು ರಚನೆ ಮಾಡಿ ಪಂಡಿತರ ಆಸ್ಥಾನದಲ್ಲಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದರು. ಜನಸಾಮಾನ್ಯರೂ ಸಹ ಸಾಹಿತ್ಯ ರಚನೆಯನ್ನು ಮಾಡಿದರು.

ಬಸವಣ್ಣನವರ ಪ್ರತಿಯೊಂದೂ ವಚನಗಳು ಅತ್ಯಂತ ಮಹತ್ವದ್ದಾಗಿದ್ದು, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕಾರಿಯಾಗುತ್ತವೆ. ಬಸವಣ್ಣನವರನ್ನು ಯುಗ ಪುರುಷ ಎಂದು ಕರೆಯುತ್ತಾರೆ. ಅವರು ೧೨ ನೆಯ ಶತಮಾನದಲ್ಲಿ ಕಂಡ ಕನಸು ಇಂದಿಗೂ ನನಸಾಗದಿರುವುದು ಭಾರತ ದೇಶದ ದುರ್ದೈವ. ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅವರಿಗೆ ನಾವು ಗೌರವವನ್ನು ಸಲ್ಲಿಸೋಣ.*********************************

✍️.ಚಿರಂಜೀವಿ
ಪ್ರೊ. ಸಿದ್ದು ಸಾವಳಸಂಗ, ತಾಜಪುರ
ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು
ವಿಜಯಪುರ

Back to top button