ಪುಸ್ತಕ ಅವಲೋಕನಅನುಭವಗಳ ಬುತ್ತಿ “ಅನುಭವಾಮೃತ” ಕೃತಿ…!!
ಪ್ರಕೃತಿ ಬೆಳಗಾವಿ ಸುದ್ದಿ : “ಚಿಂತನಾ ಲಹರಿ” ಎಂಬ ಬಾನುಲಿ ಚಿಂತನೆಗಳ ಸಂಗ್ರಹ ಕೃತಿಯ ಮೂಲಕ ಸಾಹಿತ್ಯ ಸಹೃದಯರ ಮನ ಗೆದ್ದಿರುವ, ಶ್ರೀ. ಸಿದ್ದಲಿಂಗ ಲಕ್ಷ್ಮಣ. ಇಂಗಳೇಶ್ವರ ಅವರ ಎರಡನೆಯ ಕೃತಿ “ಅನುಭವಾ ಮೃತ” ಎಂಬುದು. ಅವರೇ ಹೇಳಿರುವಂತೆ ಇದು ವಿಚಾರಧಾರೆಗಳ ಸಂಗ್ರಹ. ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ 35 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿರುವ, ಇಂಗಳೇಶ್ವರ ಅವರು ತಮ್ಮ ಅನುಭವಕ್ಕೆ ಬಂದ ಹಲವಾರು ಮಹಾನ್ ವ್ಯಕ್ತಿಗಳ ಹೇಳಿಕೆಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಕೃತಿಯನ್ನು ಹೊರ ತರುವ ಪೂರ್ವದಲ್ಲಿ ಲೇಖಕರು ಸಾಕಷ್ಟು ಅಧ್ಯಯನ ಮಾಡಿ, ಅನೇಕ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾದ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಿ ಒಂದೇ ಸೂರಿನಡಿ ದೊರೆಯುವಂತೆ ಮಾಡಿದ್ದಾರೆ.
ಈ ಕೃತಿಗೆ ವಿಜಯಪುರದ ಹಿರಿಯ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಶ್ರೀ.ಯು. ಎನ್. ಕುಂಟೋಜಿಯವರು ಮುನ್ನುಡಿಯನ್ನು ಬರೆದಿದ್ದಾರೆ. ಹಾಗೆಯೇ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರದ ಸಂಯೋಜನಾಧಿಕಾರಿಗಳಾದ ಡಾ. ವಿ.ಡಿ.ಐಹೊಳ್ಳಿಯವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ಉಪನ್ಯಾಸಕರಾದ ಎಂ.ಬಿ. ನಾಯಕವಾಡಿ ಅವರು ಲೇಖಕರ ಸಂಕ್ಷಿಪ್ತ ಪರಿಚಯವನ್ನು ತುಂಬಾ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. 85 ಪುಟಗಳಲ್ಲಿ 500 ಚಿಂತನೆಗಳನ್ನು ಸಂಗ್ರಹಿಸಿರುವುದು ಈ ಕೃತಿಯ ಒಂದು ವಿಶೇಷ.
ಪುಸ್ತಕವನ್ನು ಪ್ರವೇಶ ಮಾಡಿದಾಗ ನಮ್ಮ ಮನ ಸೆಳೆಯುವ ಅನೇಕ ಹೇಳಿಕೆಗಳಿವೆ.
ಅಹಂಕಾರ ಇದ್ದರೆ ಅವನತಿ ಖಚಿತ
ಸರಳತೆ ಇದ್ದರೆ ಸಮೃದ್ಧಿ ನಿಶ್ಚಿತ
ಎಂಬ ಹೇಳಿಕೆಯು ಮನುಷ್ಯನ ದುರಹಂಕಾರವನ್ನು ಎತ್ತಿ ತೋರಿಸುತ್ತದೆ. ಅಹಂಕಾರದಿಂದ ರಾವಣ, ದುರ್ಯೋಧನ, ದುಶ್ಯಾಸನ ಇತ್ಯಾದಿ ವ್ಯಕ್ತಿಗಳು ನಾಶ ಹೊಂದಿದ ಕಥೆಯನ್ನು ರಾಮಾಯಣ ಮಹಾಭಾರತದಲ್ಲಿ ಕೇಳಿದ್ದೇವೆ. ಸಮಯವು ಎಲ್ಲಕ್ಕಿಂತಲೂ ಅತೀ ಶ್ರೇಷ್ಠ. ಅದನ್ನು ಕಳೆದುಕೊಂಡರೆ ಮತ್ತೆ ಪಡೆಯಲಾಗುವುದಿಲ್ಲ.
ನಾವು ಸಮಯ ಹಾಳು ಮಾಡುತ್ತಾ ಹೋದರೆ
ಸಮಯವೇ ನಮ್ಮನ್ನು ನಿಸ್ಸಂಶಯವಾಗಿ ಹಾಳುಮಾಡುತ್ತದೆ.
ಎಂಬ ವಿಚಾರ ನಮ್ಮ ಮನಸ್ಸನ್ನು ಸೆಳೂಯುತ್ತದೆ. ಸಮಯಕ್ಕೆ ಎಲ್ಲರೂ ಬೆಲೆ ಕೊಡಬೇಕು. ಹಣ ಹೋದರೆ ಮತ್ತೆ ಗಳಿಸಬಹುದು. ಆದರೆ ಸಮಯ ಕಳೆದು ಹೋದರೆ ಮತ್ತೆ ಸಿಗುವುದಿಲ್ಲ ಎಂಬ ಆಲೋಚನೆ ಇದೆ.
ಇಂದು ಮನುಷ್ಯರು ಹಣ ಸಂಪಾದನೆ ಮಾಡಲು ಹಾಗೂ ಸನ್ಮಾನ ಮಾಡಿಸಿಕೊಳ್ಳಲು ಏನೆಲ್ಲ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ.
ಸನ್ಮಾನ ದೊಡ್ಡದಲ್ಲ ಸಂಸ್ಕಾರ ದೊಡ್ಡದು
ಹಣ ದೊಡ್ಡದಲ್ಲ ಗುಣ ದೊಡ್ಡದು
ನಾವು ಜಗತ್ತಿನಲ್ಲಿ ಹಣವೇ ದೊಡ್ಡದು ಎನ್ನುತ್ತೇವೆ. ಅದಕ್ಕಾಗಿ ದುಡ್ಡೇ ದೊಡ್ಡಪ್ಪ ಎನ್ನುತ್ತಾರೆ. ಹಣಕ್ಕಿಂತಲೂ ಗುಣವೆ ಶ್ರೇಷ್ಠ ಎಂಬ ವಿಚಾರ ಮೆಚ್ಚತಕ್ಕದ್ದು.
ಈ ಜಗತ್ತು ವಿಶಾಲವಾಗಿದೆ. ಇಲ್ಲಿ ನಾನಾ ಮನಸ್ಥಿತಿಯನ್ನು ಹೊಂದಿದ ಜನರಿದ್ದಾರೆ. ನಾವು ಎಲ್ಲರಿಗೂ ಎಲ್ಲವನ್ನು ಅರ್ಥ ಮಾಡಿಸುವ ಅವಶ್ಯಕತೆ ಇಲ್ಲ. ಕಾಲವೇ ಅದಕ್ಕೆ ಉತ್ತರ ನೀಡುತ್ತದೆ. ನಾವು ನಮ್ಮ ಕಾರ್ಯವನ್ನು ಮಾಡುತ್ತಾ ಹೋಗಬೇಕು.
ಎಲ್ಲಾ ಗೊತ್ತಿದ್ದು ಗೊತ್ತಿಲ್ಲದಂತೆ ಇರಬೇಕು
ಅರ್ಥ ಮಾಡಿಕೊಂಡವರು ಜೊತೆಗಿರುತ್ತಾರೆ
ಅನುಮಾನ ಪಟ್ಟವರು ದೂರ ಸರಿಯನ್ನುತ್ತಾರೆ
ಎಂಬ ವಿಚಾರವು ಸತ್ಯವಾಗಿದೆ. ನಮ್ಮನ್ನು ಅರ್ಥಮಾಡಿಕೊಂಡವರು ನಮ್ಮನ್ನು ಬಿಟ್ಟು ಹೋಗುವುದಿಲ್ಲ.
ಆದರೆ ನಮ್ಮನ್ನು ಅರ್ಥಮಾಡಿಕೊಳ್ಳದವರು ನಮ್ಮನ್ನು ಬಿಟ್ಟು ಹೋಗುತ್ತಾರೆ. ಅದಕ್ಕಾಗಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂಬುದು ಇದರ ವಿಚಾರ.
ಎಷ್ಟೋ ಸಲ ಸಣ್ಣ ವಿಚಾರವೆಂದು ಕಡೆಗಣಿಸಿ ಬಿಡುತ್ತೇವೆ. ಮುಂದೆ ಅದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಧೂಳು ಕಾಲು ಕೆಳಗೆ ಇದೆ ಎಂದು ಕಡೆಗಣಿಸಬೇಡ
ಅದು ಕಣ್ಣಲ್ಲಿ ಬಿದ್ದಾಗ ಗೊತ್ತಾಗುತ್ತದೆ ಅದರ ಬೆಲೆ
ಅತಿ ಚಿಕ್ಕ ವಿಷಯವನ್ನು ಕಡೆಗಣಿಸಬಾರದು. ಸಣ್ಣ ಸಣ್ಣ ವಿಷಯಗಳನ್ನು ಪರಿಹರಿಸಿಕೊಳ್ಳುತ್ತಾ ಮನುಷ್ಯ ಮುಂದೆ ಸಾಗಬೇಕು.
ಸ್ನೇಹಿತರೆ ಬಾಳಿನ ಬೆಳಕು. ಸ್ನೇಹಿತರಿಲ್ಲದ ಜೀವನ ಅದು ನರಕಕ್ಕೆ ಸಮಾನ.
ಬಿದ್ದಾಗ ನೋಡಿ ನಗುವ ಜನರಿಗಿಂತ
ಕೈಹಿಡಿದು ಮೇಲಕ್ಕೆತ್ತುವ ಒಬ್ಬ ಸ್ನೇಹಿತನಿದ್ದರೆ ಸಾಕು
ಎಂಬ ವಿಚಾರ ಉತ್ತಮ ಸ್ನೇಹಿತನ ಅವಶ್ಯಕತೆಯನ್ನು ಹೇಳುತ್ತದೆ. ಇವತ್ತು ಸಂಬಂಧಗಳು ಹಾಳಾಗುತ್ತಿವೆ. ತಂದೆ ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಸ್ನೇಹಿತರ ಸಂಬಂಧಗಳು ಕೆಡಲು ಮನುಷ್ಯನ ಅಹಂಕಾರ ಹಾಗೂ ದುರ್ಬುದ್ಧಿಯೇ ಕಾರಣವಾಗಿದೆ.
ಯಾವ ಸಂಬಂಧಗಳು ತಾವಾಗಿಯೇ ಹಾಳಾಗುವುದಿಲ್ಲ
ಅನುಮಾನ, ಅಹಂಕಾರ, ಹಣ, ನಿಧಾನವಾಗಿ ಸಂಬಂಧಗಳನ್ನು ಕಡಿಮೆ ಮಾಡುತ್ತವೆ
ನಮಗೆ ಅಹಂಕಾರ ಬಂದಾಗ ಸಂಬಂಧಗಳು ಕೆಡುತ್ತವೆ. ಹಣ ಎಲ್ಲ ಸಂಬಂಧಗಳನ್ನು ಹಾಳುಮಾಡುತ್ತದೆ. ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸಿತು ಎಂಬ ಗಾದೆಯ ಮಾತು ನೂರಕ್ಕೆ ನೂರು ಸತ್ಯ. ಹಣಕ್ಕಾಗಿ ಇಂದು ಹೊಡೆದಾಟ ಬಡೆದಾಟ ಸಾಮಾನ್ಯವಾಗಿದೆ.
ಯಶಸ್ಸು ಮನುಷ್ಯನಿಗೆ ಸುಲಭವಾಗಿ ಸಿಗಬಾರದು. ಆತ ಕಷ್ಟಪಟ್ಟು ಸಂಪಾದನೆ ಮಾಡಬೇಕು. ಬಹಳ ವರ್ಷದ ಪ್ರಯತ್ನದ ನಂತರ ಸಿಕ್ಕ ಯಶಸ್ಸು ನೆಮ್ಮದಿಯನ್ನು ಕೊಡುತ್ತದೆ.
ತಡವಾಗಿ ಸಿಕ್ಕ ಯಶಸ್ಸು ವ್ಯಕ್ತಿತ್ವ ರೂಪಿಸುತ್ತದೆ
ಬೇಗ ಸಿಕ್ಕ ಯಶಸ್ಸು ಅಹಂಕಾರ ಬಿಂಬಿಸುತ್ತದೆ
ಒಬ್ಬ ವ್ಯಕ್ತಿ ಏನೂ ಪ್ರಯತ್ನ ಪಡದೆ ಅದೃಷ್ಟವಷಾತ್ ಯಶಸ್ಸು ಸಿಕ್ಕಾಗ ಆತನಿಗೆ ಅಹಂಕಾರ ಬರುತ್ತದೆ. ನಾನೇ ಶ್ರೇಷ್ಠ ಎಂಬ ಭಾವನೆ ಮೂಡುತ್ತದೆ. ಅದೇ ಕಷ್ಟಪಟ್ಟು ಯಶಸ್ಸು ಸಂಪಾದಿಸಿದ ವ್ಯಕ್ತಿ ಎಲ್ಲರ ಗೌರವಕ್ಕೂ ಪಾತ್ರನಾಗುತ್ತಾನೆ. ಅವಕಾಶಗಳು ಬಂದಾಗ ಮನುಷ್ಯ ಸದುಪಯೋಗಪಡಿಸಿಕೊಳ್ಳಬೇಕು. ಪದೇ ಪದೇ ಅವಕಾಶಗಳು ಬರುವುದಿಲ್ಲ. ಬಂದ ಅವಕಾಶವನ್ನು ಕಳೆದುಕೊಳ್ಳಬಾರದು.
ದೇವರು ವರವನ್ನು ಕೊಡುವುದಿಲ್ಲ ಶಾಪವನ್ನು ಕೊಡುವುದಿಲ್ಲ
ಕೇವಲ ಅವಕಾಶಗಳನ್ನಷ್ಟೇ ಕೊಡುತ್ತಾನೆ
ಅವಕಾಶಗಳನ್ನು ಹೇಗೆ ಬಳಸುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ
ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಾದರೆ ಅವರಿಗೆ ಅವಕಾಶಗಳು ದೊರೆಯಬೇಕು. ದೇವರು ಅವಕಾಶವನ್ನು ಒದಗಿಸಿ ಕೊಟ್ಟಾಗ ಅದನ್ನು ಬಳಸಿಕೊಂಡು ಮೇಲೆ ಬರಬೇಕು. ನಾವು ಈ ಭೂಮಿಯ ಮೇಲೆ ಹುಟ್ಟಿ ಬಂದ ಮೇಲೆ ಏನಾದರೂ ಸಾಧನೆ ಮಾಡಬೇಕು. ಹಾಗೆಯೇ ನಮ್ಮ ಬದುಕು ಆದರ್ಶವಾಗಿರಬೇಕು. ಇನ್ನೊಬ್ಬರಿಗೆ ಮಾರ್ಗದರ್ಶಕವಾಗಿರಬೇಕು.
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ
ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ
ನಮ್ಮ ಸಾಧನೆಯನ್ನು ನಾಲ್ಕು ಜನ ಗುರುತಿಸಬೇಕು. ನಮ್ಮ ಆದರ್ಶವನ್ನು ನಾಲ್ಕು ಜನ ಅನುಸರಿಸಬೇಕು. ಅಂದಾಗ ನಮ್ಮ ಬದುಕಿಗೆ ಒಂದು ಬೆಲೆ.
ಬದುಕನ್ನು ಎದುರಿಸಲಾಗದೆ ಸೋತು ಕೈಕಟ್ಟಿ ಕುಳಿತವರು ಎಷ್ಟೋ ಜನರಿದ್ದಾರೆ. ಹಲವರು ಹೆದರಿ ಓಡಿ ಹೋಗಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೀವನ ಎನ್ನುವ ಯುದ್ಧವನ್ನು ಗೆಲ್ಲಲು
ಧೈರ್ಯಕ್ಕಿಂತ ಮಿಗಿಲಾದ ಆಯುಧ ಇನ್ನೊಂದಿಲ್ಲ
“ಧೈರ್ಯಂ ಸರ್ವತ್ರ ಸಾಧನಂ” ಎಂಬ ಸಂಸ್ಕೃತ ಶ್ಲೋಕವು ಇದನ್ನೇ ಹೇಳುತ್ತದೆ. ಧೈರ್ಯವಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು. ಜೀವನ ಎನ್ನುವುದು ಒಂದು ನಿರಂತರ ಹೋರಾಟ. ಇದನ್ನು ಗೆಲ್ಲಲು ಧೈರ್ಯವೇ ನಮಗೆ ಮಹಾನ್ ಅಸ್ತ್ರ.
ಗೆದ್ದ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳುವವರು ಬಹಳ ಜನರಿದ್ದಾರೆ. ಆದರೆ ಸೋತ ವ್ಯಕ್ತಿಗೆ ಸಾಂತ್ವನ ಹೇಳಿ ಮುನ್ನಡೆಸುವವರು ಯಾರೂ ಇಲ್ಲ. ಸೋತವರನ್ನು ನೋಡಿ ನಗುವವರೇ ಹೆಚ್ಚು ಜನ.
ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವುದಕ್ಕಿಂತ
ಬಿದ್ದ ವ್ಯಕ್ತಿಯನ್ನು ಕೈ ಹಿಡಿದು ಎತ್ತುವವರು ದೊಡ್ಡವರಾಗುತ್ತಾರೆ
ಗೆದ್ದ ವ್ಯಕ್ತಿಯನ್ನು ಅಭಿನಂದಸಬಾರದು ಎಂದಲ್ಲ. ಅಭಿನಂದಿಸಿ. ಆದರೆ ಬಿದ್ದ ವ್ಯಕ್ತಿಯನ್ನು ಕಡೆಗಣಿಸಬೇಡಿ. ಹಣ ಮತ್ತು ಸಮಯಕ್ಕೆ ಈ ಜಗತ್ತಿನಲ್ಲಿ ತನ್ನದೇ ಆದ ಸ್ಥಾನಗಳಿವೆ. ಹಣವನ್ನು ಹೇಗೆ ಬೇಕಾದರೂ ಖರ್ಚು ಮಾಡಬಹುದು. ಆದರೆ ಸಮಯವನ್ನು ಹಾಗೆ ಖರ್ಚು ಮಾಡಬಾರದು.
ಹಣವನ್ನು ಯಾರಿಗೆ ಬೇಕಾದರೂ ಖರ್ಚು ಮಾಡು
ಸಮಯವನ್ನು ಮಾತ್ರ ಅರ್ಹತೆ ಇದ್ದವರಿಗೆ ಮಾತ್ರ ವ್ಯಯ ಮಾಡಿ
ಹಣ ಖರ್ಚಾದರೆ ಮುಂದೆ ಮತ್ತೆ ಗಳಿಸಬಹುದು. ಆದರೆ ಸಮಯ ಹಾಗಲ್ಲ. ಸಮಯವನ್ನು ಅರ್ಹತೆ ಇದ್ದವರಿಗೆ ಮಾತ್ರ ಖರ್ಚು ಮಾಡಿ.
ಪುಸ್ತಕಗಳು ಮಾನವನ ನಿಜವಾದ ಮಿತ್ರ. ಮೈಮೇಲೆ ಹರಿದ ಬಟ್ಟೆ ಇದ್ದರೂ ಕೈಯಲ್ಲಿ ಒಂದು ಪುಸ್ತಕವಿರಲಿ ಎಂಬುದು ಬಹಳ ಹಳೆಯ ಮಾತು.
ಬದುಕಿಗೆ ಬೇಕು ಪುಸ್ತಕ
ಪುಸ್ತಕವನ್ನು ಮಿತ್ರ ಮಾಡಿಕೊಂಡರೆ
ನೀನಾಗುವೆ ಅಪ್ರತಿಮ ಸಾಧಕ
ಇಂದು ಜಗತ್ತು ಮೊಬೈಲಿನಲ್ಲಿ ಮುಳುಗಿದೆ. ಅದರ ಬದಲು ಪುಸ್ತಕಗಳನ್ನು ಓದಿದರೆ ಜ್ಞಾನಾಭಿವೃದ್ಧಿಯಾಗುತ್ತದೆ. ‘ದೇಶ ಸುತ್ತು ಕೋಶ ಓದು’ ಎಂಬ ಗಾದೆಯ ಮಾತು ಪುಸ್ತಕಗಳ ಮಹತ್ವವನ್ನು ಹೇಳುತ್ತದೆ.
ಸಾವು ಬದುಕಿನ ಮಧ್ಯ ಮಾನವ ಜಗತ್ತಿಗೆ ಏನಾದರೂ ಸಾಧನೆ ಮಾಡಿ ತೋರಿಸಬೇಕು. ಸುಮ್ಮನೆ ಆಯುಷ್ಯವನ್ನು ಕಳೆಯಬಾರದು. ಹಾಗೆ ಮಾಡಿದರೆ ಆತ ನಿರುಪಯುಕ್ತ ವ್ಯಕ್ತಿಯಾಗುತ್ತಾನೆ.
ಸತ್ತ ಮೇಲೆ ಮಲಗೋದು ಇದ್ದೇ ಇದೆ
ಬದುಕಿದ್ದಾಗ ಏನಾದರೂ ಸಾಧಿಸಿ ತೋರಿಸಿ
ಸಾಯುವ ಪೂರ್ವದಲ್ಲಿ ಏನಾದರೂ ಸಾಧಿಸುವುದು ಬಹಳ ಮುಖ್ಯ. ಸತ್ತ ಮೇಲೆ ಏನನ್ನೂ ಮಾಡಲಾಗುವುದಿಲ್ಲ.
ಜಗತ್ತಿನಲ್ಲಿ ಶ್ರೇಷ್ಠ ದಾನವೆಂದರೆ ಅನ್ನದಾನ. ಅನ್ನವನ್ನು ದೇವರೆಂದು ಕರೆಯುತ್ತಾರೆ.
ಚೆನ್ನಕ್ಕಿಂತ ಅನ್ನಕ್ಕೆ ಬೆಲೆ ಜಾಸ್ತಿ
ಚಿನ್ನವಿಲ್ಲದೆ ದಿನ ಕಳೆಯಬಹುದು
ಅನ್ನವಿಲ್ಲದೆ ದಿನಕಳೆಯಲು ಸಾಧ್ಯವಿಲ್ಲ
ಮನುಷ್ಯ ಅನ್ನವನ್ನು ತಿಂದು ಬದುಕುತ್ತಾನೆ. ಚಿನ್ನ ತಿಂದು ಬದುಕಲಾಗುವುದಿಲ್ಲ. ಆದ್ದರಿಂದ ಅನ್ನವೇ ಶ್ರೇಷ್ಠ.
ಮನುಷ್ಯ ತನಗೆ ಕಷ್ಟ ಬಂದಾಗ ಬೇರೆಯವರು ಸ್ಪಂದಿಸಬೇಕೆಂದು ಬಯಸುತ್ತಾನೆ. ಹಾಗೆಯೇ ನಾವೂ ಸಹ ಬೇರೆಯವರ ಕಷ್ಟಗಳಿಗೆ ಸ್ಪಂದಿಸಬೇಕು. ಇಂದು ಯಾರ ಕಷ್ಟಗಳಿಗೂ ಯಾರೂ ಸಹಾಯ ಮಾಡುವುದಿಲ್ಲ. ಇಲ್ಲದ ಉಸಾಬರಿ ನಮಗೇಕೆ ಎಂದು ಸುಮ್ಮನಿದ್ದು ಬಿಡುತ್ತಾರೆ.
ದಾರಿಯಲ್ಲಿ ಬಿದ್ದ ಕಲ್ಲನ್ನು ನೋಡಿ ದಾಟಿ ಹೋಗುವವರು ಬುದ್ಧಿವಂತರು
ಅದನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುವವರು ಹೃದಯವಂತರು
ಬುದ್ಧಿವಂತಿಕೆಯೊಂದಿಗೆ ಮನುಷ್ಯನಲ್ಲಿ ಹೃದಯವಂತಿಕೆಯೂ ಇರಬೇಕು. ಅಂತವನನ್ನು ಜನ ಮೆಚ್ಚುತ್ತಾರೆ.
ಹೀಗೆ ಈ ಕೃತಿಯಲ್ಲಿ ಹಲವಾರು ವಿಚಾರಗಳಿಂದ ಕೂಡಿದ ಮಹತ್ವದ ಆಲೋಚನೆಗಳಿವೆ. ಈ “ಅನುಭವಾಮೃತ” ಪುಸ್ತಕವನ್ನು ಓದುವುದರಿಂದ ಮನುಷ್ಯನಿಗೆ ಜ್ಞಾನ ಬೆಳೆಯುತ್ತದೆ. ಕೇವಲ ಓದಿದರೆ ಮಾತ್ರ ಸಾಲದು ಆ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಈ ಕೃತಿಯ ಲೇಖಕರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತಾಗುತ್ತದೆ.ಅವರು ಕಷ್ಟಪಟ್ಟು ಹರಿದು ಹಂಚಿ ಹೋಗಿರುವ ವಿಚಾರಗಳನ್ನು ಒಂದು ಕಡೆ ನಮಗೆ ಕೂಡಿಸಿ ಕೊಟ್ಟಿದ್ದಾರೆ. ಅವರ ಶ್ರಮ ನಿಜಕ್ಕೂ ಸಾರ್ಥಕವಾದದ್ದು. ಈ ಕೃತಿಯ ಲೇಖಕರಾದ ಎಸ್.ಎಲ್.ಇಂಗಳೇಶ್ವರ ಅವರು ಶಿಕ್ಷಣ ಹಾಗೂ ಸಾಹಿತ್ಯದ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದವರು. ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೂ ಆಗಿರುವ ಲೇಖಕರು 70 ರ ಇಳಿ ವಯಸ್ಸಿನಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ಎಲ್ಲೇ ಇದ್ದರೂ ತಪ್ಪದೆ ಭಾಗವಹಿಸುತ್ತಾರೆ. ಅವರಿಂದ ಉತ್ತಮ ವಿಚಾರಗಳನ್ನು ಹೊಂದಿದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ನಾನು ಮನ ತುಂಬಿ ಹಾರೈಸುತ್ತೇನೆ.
ಲೇಖಕರು : ಪ್ರೊ. ಸಿದ್ದು ಸಾವಳಸಂಗ, ತಾಜಪುರ
ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು, ವಿಜಯಪುರ…











