*ರಾಮದುರ್ಗ-ಬೆಳಗಾವಿ ಮುಖ್ಯ ರಸ್ತೆ ದುರಸ್ತಿ ಯಾವಾಗ? ಅಧಿಕಾರಿಗಳು, ಶಾಸಕರ ನಿರ್ಲಕ್ಷ್ಯಕ್ಕೆ ಸುಭಾಸ್ ಗೋಡಖೆ ಆಕ್ರೋಶ*

ಪ್ರಕೃತಿ ಬೆಳಗಾವಿ ಸುದ್ದಿ : ರಾಮದುರ್ಗದಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುಮಲ ಹೋಟೆಲ್ ಎದುರಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇದು ರಾಮದುರ್ಗದಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಅತಿ ಮುಖ್ಯ ರಸ್ತೆ. ದಿನನಿತ್ಯ ಸಾವಿರಾರು ವಾಹನಗಳು, ಪ್ರಯಾಣಿಕರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ರಾಮದುರ್ಗದ ಹೊಟೇಲ್ ತಿರುಮಲ ಎದುರು ಇರುವ ರಸ್ತೆಯ ಸ್ಥಿತಿ ನೋಡಿದರೆ ಇದು ರಸ್ತೆಯೋ ಅಥವಾ ಕೆರೆಯೋ ಎಂಬ ಅನುಮಾನ ಬಾರದೆ ಇರದು. ರಸ್ತೆಯುದ್ದಕ್ಕೂ ಬರೋಬ್ಬರಿ ಎರಡು ಮೂರು ಅಡಿ ಆಳದ ತಗ್ಗು-ದಿಣ್ಣೆಗಳು ಪ್ರತ್ಯಕ್ಷವಾಗಿದ್ದು, ವಾಹನ ಸವಾರರಿಗೆ ನಿತ್ಯ ಯಮದರ್ಶನವಾಗುತ್ತಿದೆ.
: ಹೊಟೇಲ್ ತಿರುಮಲ ಎದುರಿನ ರಸ್ತೆಯ ಆಳವಾದ ತಗ್ಗುಗಳು, ವಾಹನಗಳು ಕಷ್ಟಪಟ್ಟು ಸಾಗುತ್ತಿರುವ
ಹಲವಾರು ದಿನಗಳಿಂದ ಇಲ್ಲಿನ ಪರಿಸ್ಥಿತಿ ‘ಅದೇ ರಾಗ, ಅದೇ ಹಾಡು’ ಎನ್ನುವಂತಾಗಿದೆ.
ಸಣ್ಣಪುಟ್ಟ ಅಪಘಾತಗಳು ಇಲ್ಲಿ ನಿತ್ಯ ನಿರಂತರ ಬೈಕ್ ಸವಾರರು, ಶಾಲಾ ಮಕ್ಕಳು ಮತ್ತು ವೃದ್ಧರು ಈ ಹೊಂಡಗಳಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಮಳೆಗಾಲದಲ್ಲಂತೂ ಗುಂಡಿಗಳಲ್ಲಿ ನೀರು ನಿಂತು ವಾಹನ ಚಾಲನೆ ಮಾಡುವುದೇ ದುಸ್ತರವಾಗುತ್ತದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸುಭಾಸ್ ಗೋಡಖೆ ಆರೋಪಿಸಿದ್ದಾರೆ.
ಸುಭಾಸ್ ಗೋಡಖೆ (ಜನಪರ ಟ್ರಸ್ಟ್ ಅಧ್ಯಕ್ಷ
“ರಾಮದುರ್ಗ-ಬೆಳಗಾವಿ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ತಿರುಮಲ ಹೋಟೆಲ್ ಮುಂಭಾಗದಲ್ಲಿ ಎರಡು-ಮೂರು ಅಡಿ ತಗ್ಗು ಬಿದ್ದರೂ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ. ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು.
ನಮ್ಮ ಕ್ಷೇತ್ರದ ಶಾಸಕರಾದ ಅಶೋಕ್ ಪಟ್ಟಣ್‌ರವರು ಈ ಕಡೆ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು.”
ಜನಪರ ಟ್ರಸ್ಟ್ ವತಿಯಿಂದ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಸ್ತೆ ಸುಧಾರಣೆಗೆ ಆಗ್ರಹಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಾಮದುರ್ಗ ಶಾಸಕ ಅಶೋಕ್ ಪಟ್ಟಣ್‌ರವರು ಇನ್ನಾದರೂ ಇತ್ತ ಗಮನಹರಿಸುತ್ತಾರಾ? ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಶೀಘ್ರವಾಗಿ ರಸ್ತೆ ಡಾಂಬರೀಕರಣ ಅಥವಾ ಕಾಂಕ್ರೀಟೀಕರಣ ಮಾಡಿಸುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.*****************************






