*382 ಕೋಟಿ ಬಾಕಿ, 52 ಕೋಟಿ ನಷ್ಟ; ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ವಿರುದ್ಧ ಗಂಭೀರ ಆರೋಪ*

ಪ್ರಕೃತಿ ಬೆಳಗಾವಿ ಸುದ್ದಿ : ಹುಕ್ಕೇರಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆರ್ಥಿಕ ವ್ಯವಹಾರಗಳ ಕುರಿತು ಗಂಭೀರ ಪ್ರಶ್ನೆಗಳು ಹಾಗೂ ಆರೋಪಗಳು ಕೇಳಿಬಂದಿವೆ. 2025-26ನೇ ಸಾಲಿನಲ್ಲಿ ಸಂಘಕ್ಕೆ ಸುಮಾರು 52 ಕೋಟಿ ರೂ. ನಷ್ಟವಾಗಿದ್ದು, ಹೆಸ್ಕಾಂಗೆ ಬರೋಬ್ಬರಿ 383 ಕೋಟಿ ರೂ. ಬಾಕಿ ಉಳಿದಿದೆ ಎಂದು ಸಂಘದ ಅಧ್ಯಕ್ಷ ಮಹಾವೀರ ನೀಲಜಗಿ ಅವರು ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ವಿದ್ಯುತ್ ಬಳಕೆದಾರರು ಹಾಗೂ ಸಂಘದ ಸದಸ್ಯರಿಂದ ನಿರಂತರವಾಗಿ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದರೂ, ಹೆಸ್ಕಾಂಗೆ ಇಷ್ಟೊಂದು ಬೃಹತ್ ಮೊತ್ತ ಬಾಕಿ ಉಳಿದಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದಸ್ಯರು ಮತ್ತು ಗ್ರಾಹಕರು ಕಟ್ಟಿದ ನೂರಾರು ಕೋಟಿ ರೂಪಾಯಿಗಳ ಹಣದ ನಿರ್ವಹಣೆ ಹೇಗೆ ನಡೆದಿದೆ ಎಂಬುದಕ್ಕೆ ಆಡಳಿತ ಮಂಡಳಿ ಸ್ಪಷ್ಟ ಲೆಕ್ಕ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಸದಸ್ಯರು ಕಟ್ಟಿದ ಹಣ ಎಲ್ಲಿ ಹೋಯಿತು?
ವಿದ್ಯುತ್ ಶುಲ್ಕದ ರೂಪದಲ್ಲಿ ಸಂಗ್ರಹವಾದ ಹಣ ಎಷ್ಟು? ಹೆಸ್ಕಾಂಗೆ ಎಷ್ಟು ಪಾವತಿಸಲಾಗಿದೆ? ಎಷ್ಟು ಬಾಕಿ ಉಳಿದಿದೆ? ಸಂಘದ ಆಡಳಿತ, ಸಿಬ್ಬಂದಿ ವೇತನ, ನಿರ್ವಹಣೆ ಹಾಗೂ ಇತರ ವೆಚ್ಚಗಳಿಗೆ ಎಷ್ಟು ಹಣ ಖರ್ಚಾಗಿದೆ? 52 ಕೋಟಿ ರೂ. ನಷ್ಟಕ್ಕೆ ಕಾರಣವಾದ ನಿರ್ಧಾರಗಳೇನು? ಎಂಬ ಪ್ರಶ್ನೆಗಳಿಗೆ ದಾಖಲೆ ಸಹಿತ ಉತ್ತರ ನೀಡಬೇಕಾಗಿದೆ.
ಟಿಸಿ ಅಳವಡಿಕೆಗೂ ಹಣ?
ವಿದ್ಯುತ್ ಪರಿವರ್ತಕ ಅಳವಡಿಕೆ ಮತ್ತು ದುರಸ್ತಿ ಕಾರ್ಯಗಳಿಗೂ ರೈತರಿಂದ ಹಣ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯುತ್ ಶುಲ್ಕ ಪಾವತಿಸುವ ರೈತರು ಮೂಲಭೂತ ವಿದ್ಯುತ್ ಸೇವೆ ಪಡೆಯಲು ಮತ್ತೆ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂಬುದನ್ನು ಸಂಘ ಸ್ಪಷ್ಟಪಡಿಸಬೇಕಿದೆ.
ಸರ್ಕಾರದ ಯೋಜನೆಗಳ ಪ್ರಯೋಜನ ಎಲ್ಲಿ?
ಸಹಕಾರಿ ಸಂಘದ ಮೂಲಕ ರೈತರಿಗೆ ತಲುಪಬೇಕಾದ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಸಂಘದ ಮೂಲ ಉದ್ದೇಶವೇ ಸದಸ್ಯರು ಹಾಗೂ ರೈತರ ಹಿತ ಕಾಪಾಡುವುದಾದರೆ, ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗಿದ್ದರೆ ಅದರ ಹೊಣೆಗಾರಿಕೆ ಯಾರದ್ದು ಎಂಬುದನ್ನೂ ಬಹಿರಂಗಪಡಿಸಬೇಕಾಗಿದೆ.
383 ಕೋಟಿ ಬಾಕಿ ಹೇಗೆ?
ಹೆಸ್ಕಾಂಗೆ 383 ಕೋಟಿ ರೂ. ಬಾಕಿ ಉಳಿದಿರುವುದು ಸಾಮಾನ್ಯ ಹಣಕಾಸಿನ ವ್ಯತ್ಯಾಸವಲ್ಲ. ಇಷ್ಟು ದೊಡ್ಡ ಮೊತ್ತದ ಬಾಕಿ ನಿರ್ಮಾಣವಾಗಲು ಕಾರಣವಾದ ಅಂಶಗಳೇನು ಎಂಬುದನ್ನು ಸದಸ್ಯರ ಮುಂದಿಡಬೇಕಿದೆ. ಬಾಕಿ ಮೊತ್ತದ ವರ್ಷವಾರು ವಿವರ, ವಸೂಲಾತಿ ಮೊತ್ತ, ಪಾವತಿಸಿದ ಮೊತ್ತ ಹಾಗೂ ಬಾಕಿಯ ಮೂಲವನ್ನು ಬಹಿರಂಗಪಡಿಸಬೇಕಾಗಿದೆ.
52 ಕೋಟಿ ನಷ್ಟಕ್ಕೆ ಹೊಣೆ ಯಾರು?
ಒಂದು ವರ್ಷದ ಅವಧಿಯಲ್ಲಿ ಸುಮಾರು 52 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ, ನಷ್ಟಕ್ಕೆ ಕಾರಣವಾದ ನಿರ್ಧಾರಗಳು, ವೆಚ್ಚಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳ ಬಗ್ಗೆ ಸ್ವತಂತ್ರವಾಗಿ ಪರಿಶೀಲನೆ ನಡೆಯಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಸದಸ್ಯರ ಹಣಕ್ಕೆ ಪಾರದರ್ಶಕ ಲೆಕ್ಕ ಬೇಕು
ಸದಸ್ಯರು ಹಾಗೂ ಗ್ರಾಹಕರು ಪಾವತಿಸಿದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು. ಸಂಘದ ಆದಾಯ-ವೆಚ್ಚ, ವಿದ್ಯುತ್ ಶುಲ್ಕ ವಸೂಲಿ, ಹೆಸ್ಕಾಂಗೆ ಪಾವತಿ, ಬಾಕಿ, ಸಾಲ, ನಷ್ಟ ಹಾಗೂ ಇತರ ಹಣಕಾಸು ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಸದಸ್ಯರ ಮುಂದಿಡಬೇಕು.
383 ಕೋಟಿ ರೂ. ಬಾಕಿ, 52 ಕೋಟಿ ರೂ. ನಷ್ಟದಂತಹ ಅಂಕಿ-ಅಂಶಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ, ಸದಸ್ಯರು ಕಟ್ಟಿದ ಹಣದ ನಿರ್ವಹಣೆ ಹೇಗೆ ನಡೆಯಿತು? ಇಷ್ಟು ದೊಡ್ಡ ಬಾಕಿ ಮತ್ತು ನಷ್ಟಕ್ಕೆ ಕಾರಣವೇನು? ಹಣಕಾಸು ಅವ್ಯವಸ್ಥೆ ನಡೆದಿದ್ದರೆ ಹೊಣೆಗಾರರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವ ಹೊಣೆ ಸಂಘದ ಆಡಳಿತ ಮಂಡಳಿಯ ಮೇಲಿದೆ.*************************************











