ಪ್ರಕೃತಿ ಬೆಳಗಾವಿ

*ಜಿಲ್ಲೆಯ ಶೇ.95 ರಷ್ಟು ಕ್ಷೇತ್ರದಲ್ಲಿ ಬಿತ್ತನೆ: ಜಿಪಂ ಸಿಇಒ ರಾಹುಲ್ ಶಿಂಧೆ*

*31669 ಕ್ವಿಂಟಾಲ್ ಬಿತ್ತನೆ ಬೀಜಗಳ ವಿತರಣೆ; 2.87 ಲಕ್ಷ ಮೆ.ಟನ್ ರಸಗೊಬ್ಬರ ಪೂರೈಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲೆಯ ಮುಂಗಾರು ಹಂಗಾಮಿನ 7.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳ ಬಿತ್ತನೆ ಗುರಿಗೆ 7.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈವರೆಗೆ ಶೇ.95 ರಷ್ಟು ಕ್ಷೇತ್ರದಲ್ಲಿ ಬಿತ್ತನೆಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಇಲ್ಲಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಅನುಷ್ಟಾನ ಇಲಾಖೆಗಳ ವಿವಿಧ ಯೋಜನೆಗಳ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿಗೆ 37543 ಕ್ವಿಟಾಲ್ ವಿವಿಧ ಬಿತ್ತನೆ ಬೀಜಗಳ ಬೇಡಿಕೆ ಇದ್ದು 37267 ಕ್ವಿ. ದಾಸ್ತಾನು ಮಾಡಿ ಈವರೆಗೆ 31669 ಕ್ವಿ. ವಿತರಣೆ ಮಾಡಲಾಗಿದೆ. ಪ್ರಸ್ತುತ 5598 ಕ್ವಿ. ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಲಭ್ಯವಿದ್ದು ಬಿತ್ತನೆ ಬೀಜದ ಯಾವುದೇ ಕೊರತೆ ಇರುವುದಿಲ್ಲ. ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

*ಎಲ್ಲ ಯೋಜನೆಗಳ ಸಮರ್ಪಕ ಅನುಷ್ಟಾನ ಕೈಗೊಳ್ಳಿ:*

ಕೃಷಿ ಇಲಾಖೆಯ ವಿವಿಧ ಯೋಜನೆಗಳಾದ ಆತ್ಮಾ, ಕೃಷಿ ಭಾಗ್ಯ, ಹೈಟೆಕ್ ಹಾರ್ವೆಸ್ಟರ್ ಹಬ್, ಕೃಷಿ ಯಾಂತ್ರೀಕರಣ, ರಾಷ್ಟ್ರೀಯ ನೈಸರ್ಗಿಕ ಅಭಿಯಾನ, ಕರ್ನಾಟಕ ರೈತ ಸಮೃದ್ದಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ- ಎಣ್ಣೆ ಕಾಳು, ಬೆಳೆ ವೈವಿದ್ಯತೆ, ದ್ವಿದಳ ಧಾನ್ಯಗಳಲ್ಲಿ ಆತ್ಮ ನಿರ್ಭರತೆ, ವಿಬಿ-ಜಿ ರಾಮ ಜಿ ಯೋಜನೆಗಳ ಸಮರ್ಪಕ ಅನುಷ್ಟಾನ ಕೈಗೊಳ್ಳುವಂತೆ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ನಿರ್ದೇಶನ ನೀಡಿದರು.

*2.87 ಲಕ್ಷ ಮೆ.ಟನ್ ರಸಗೊಬ್ಬರ ಪೂರೈಕೆ:*

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೆಕರ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಈವರೆಗೆ 354 ಮಿ.ಮೀ. ವಾಡಿಕೆ ಮಳೆಗೆ 341 ಮಿ.ಮೀ. ಮಳೆ ಆಗಿದ್ದು, ಶೇಕಡಾ 4 ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಹಂಗಾಮಿಗೆ 250736 ಮೆ.ಟನ್ ರಸಗೊಬ್ಬರದ ಅವಶ್ಯಕತೆ ಇದ್ದು ಈವರೆಗೆ ಜಿಲ್ಲೆಯ 287370 ಮೆ.ಟನ್ ರಸಗೊಬ್ಬರ ಪೂರೈಕೆಯಾಗಿದೆ. 152776 ಮೆ.ಟನ್ ವಿವಿಧ ರಸಗೊಬ್ಬರ ವಿರತಣೆಯಾಗಿದ್ದು 134594 ಮೆ.ಟನ್ ರಸಗೊಬ್ಬರ ಲಭ್ಯವಿದೆ. ಕಾಪು ದಾಸ್ತಾನು ಯೋಜನೆಯಡಿ 8408 ಮೆ.ಟನ್ ಯೂರಿಯಾ ಹಾಗೂ 1265 ಮೆ.ಟನ್ ಡಿ.ಎ.ಪಿ. ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

*ಜಿಲ್ಲೆಯ 560403 ರೈತರಿಗೆ ತಾಂತ್ರಿಕ ತರಬೇತಿ:*

ಜಿಲ್ಲೆಯಾದ್ಯಂತ ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ನಿರಂತರವಾಗಿ ಕ್ಷೇತ್ರ ಭೇಟಿ ಕೈಗೊಂಡು ಸಸ್ಯ ಸಂರಕ್ಷಣಾ ಅಭಿಯಾನ, ಸುರಕ್ಷಿತ ಮತ್ತು ವಿವೆಚನಾಶೀಲ ಪೀಡೆನಾಶಕಗಳ ಬಳಕೆ ಕುರಿತು ಜಾಗೃತಿ ಅಭಿಯಾನ, ಪರ್ಯಾಯ ಬೆಳೆ ಯೋಜನೆ ಕುರಿತು ರೈತರಿಗೆ ಸೂಕ್ತ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಕಳೆದ ವರ್ಷ ಜಿಲ್ಲೆಯಾದ್ಯಂತ ವಿವಿಧ ತರಬೇತಿಗಳು, ಸಂದೇಶಗಳು, ಜಾಗೃತಿ ಅಭಿಯಾನ ಮುಂತಾದ ಕಾರ್ಯಕ್ರಮಗಳ ಮೂಲಕ 560403 ರೈತರಿಗೆ ಕೃಷಿ ತಾಂತ್ರಿಕತೆ ಕುರಿತಾದ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

*ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನಕ್ಕೆ ಮೆಚ್ಚುಗೆ:*

ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಿಂದ ಭೂಮಿಯ ಫಲವತ್ತತೆ ಸುಧಾರಿಸುವುದು ಹಾಗೂ ಸಾಗುವಳಿ ವೆಚ್ಚ ಕಡಿಮೆ ಮಾಡಿ ರೈತರ ನಿವ್ವಳ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 7048 ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡಿ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಸಿಇಒ ರವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು 12 ಕ್ಲಸ್ಟರ್ ಗಳಲ್ಲಿ ಆಸಕ್ತ ರೈತರನ್ನು ಆಯ್ಕೆಮಾಡಿ ಕೃಷಿ ಸಖಿಗಳ ನೆರವಿನೊಂದಿಗೆ ಉತ್ತಮವಾಗಿ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

*ರೈತರಿಗೆ ಅನುಕೂಲ ಕಲ್ಪಿಸಿ:*

ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್, ವಿಬಿ-ಜಿ ರಾಮ್-ಜಿ ಯೋಜನೆಗಳಡಿ ಹೆಚ್ಚಿನ ಸಹಾಯಧನಗಳನ್ನು ತಲುಪಿಸುವುದರ ಮೂಲಕ ಜಿಲ್ಲೆಯ ರೈತರ ಆದಾಯ ಮಟ್ಟವನ್ನು ಹೆಚ್ಚಿಸಲು ಕ್ರಮವಹಿಸಬೇಕು. ರೈತರಿಗೆ ಯಾವುದೇ ಅಡೆತಡೆಯಿಲ್ಲದೇ ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಬ್ಯಾಂಕುಗಳಿಂದ ಅಗತ್ಯವಿರುವ ಸಾಲಸೌಲಭ್ಯಗಳನ್ನು ಒದಗಿಸಲು ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಎಲ್ಲ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಗುಣಮಟ್ಟದ ತೋಟಗಾರಿಕೆ ಸಸಿಗಳನ್ನು ಬೆಳೆಸುವುದು ಮತ್ತು ರೈತರಿಗೆ ತೋಟಗಾರಿಕೆ ಬೆಳೆಗಳ ಕುರಿತಾಗಿ ತಾಂತ್ರಿಕ ಮಾಹಿತಿ ನೀಡಲು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.

ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಅರಣ್ಯ ಇಲಾಖೆ ಸೇರಿ ಇನ್ನಿತರ ಯೋಜನೆಗಳಡಿ ಸರ್ಕಾರದ ಕಾರ್ಯಕ್ರಮಗಳ ಸಮರ್ಪಕ ಅನುಷ್ಟಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಭೆಯಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಕೃಷಿ ಇಲಾಖೆಯ ಜಂಟಿ ಗೋಡ ಸೇರಿ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.**********************************

Leave a Reply

Your email address will not be published. Required fields are marked *

Back to top button