*ಗ್ರಾಮಕ್ಕೆ ಸ್ಮಶಾನ ಭೂಮಿ ಹಾಗೂ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡುವಂತೆ ಮನವಿ : ರಾಜ್ಯಾಧ್ಯಕ್ಷ ಮಹೇಶ್ ಎಸ್. ಶೀಗಿಹಳ್ಳಿ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಾಳೆನಟ್ಟಿ ಗ್ರಾಮಕ್ಕೆ ಸ್ಮಶಾನ ಭೂಮಿ, ವಾಲ್ಮೀಕಿ ಭವನ ಮತ್ತು ಕನ್ನಡ ಶಾಲಾ ಮಕ್ಕಳಿಗೆ ಆಟದ ಮೈದಾನ ಮಂಜೂರು ಮಾಡುವುದು ಸೇರಿದಂತೆ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ, ಕಾಳೆನಟ್ಟಿ ಹಾಗೂ ಅಂಕಲಗಿ ಗ್ರಾಮ ಘಟಕಗಳ ಪದಾಧಿಕಾರಿಗಳು ವಿವಿಧ ಅಧಿಕಾರಿಗಳಿಗೆ ಸುದೀರ್ಘ ಮನವಿ ಸಲ್ಲಿಸಿದ್ದಾರೆ.
ಅಂಕಲಗಿ ಗ್ರಾಮದಲ್ಲಿ ಸುಮಾರು 13-15 ವರ್ಷಗಳ ಹಿಂದೆ ಆರಂಭಗೊಂಡಿದ್ದ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಆದ್ದರಿಂದ ಅಪೂರ್ಣಗೊಂಡಿರುವ ಈ ಕಟ್ಟಡ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕು ಅಥವಾ ಹೊಸದಾಗಿ ವಾಲ್ಮೀಕಿ ಭವನವನ್ನು ನಿರ್ಮಿಸಿಕೊಡಬೇಕು ಎಂದು ನಿಯೋಗವು ಬಲವಾಗಿ ಒತ್ತಾಯಿಸಿದೆ.
ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ಕೈಗೊಳ್ಳಲಾಗುವುದು ಎಂದು ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶ್ ಎಸ್. ಶೀಗಿಹಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ತಾಲೂಕು ಅಧ್ಯಕ್ಷ ಮಂಗೇಶ್ ಚನ್ನಿಕುಪ್ಪಿ, ಬೆಳಗಾವಿ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ, ಅಂಕಲಗಿ ಗ್ರಾಮ ಘಟಕದ ಅಧ್ಯಕ್ಷ ಮಂಜು ಹೊಳ್ಳೆಪ್ಪಗೊಳ ಸೇರಿದಂತೆ ಅಂಕಲಗಿ ಹಾಗೂ ಕಾಳೆನಟ್ಟಿ ಗ್ರಾಮದ ಪದಾಧಿಕಾರಿಗಳು ಮತ್ತು ಯುವಕರು ಉಪಸ್ಥಿತರಿದ್ದರು.******************************






