ಪ್ರಕೃತಿ ಬೆಳಗಾವಿ

*ಜಿಲ್ಲಾ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಕಚೇರಿಯ ಆವರಣ ಸ್ವಚ್ಛತೆ*

*ಜಿಲ್ಲಾದ್ಯಂತ ಸ್ವಚ್ಛ ಶನಿವಾರ ಕಾರ್ಯಕ್ರಮ ಆಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ (ಮೇ.16) : ಸ್ವಚ್ಛ ಶನಿವಾರ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ಹಾಗೂ ಅಧೀನ ಇಲಾಖೆಗಳ ಕಾರ್ಯಾಲಯಗಳಲ್ಲಿ ಶನಿವಾರದಂದು ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯತ ಆವರಣದಲ್ಲಿ ಜಿಪಂನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಿಪಂ ಆವರಣವನ್ನು ಸ್ವಚ್ಛಗೊಳಿಸಿದರು. ತಮ್ಮ ವಿಭಾಗದ ದಾಖಲಾತಿಗಳನ್ನು ಕೂಡ ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡರು. ನಂತರ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತೆಯ “ಪ್ರತಿಜ್ಞಾವಿಧಿ” ಸ್ವೀಕರಿಸಿದರು.

ಜಿಪಂ ಉಪಕಾರ್ಯದರ್ಶಿ (ಆಡಳಿತ) ಬಸವರಾಜ ಹೆಗ್ಗನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಪಂ, ತಾಪಂ, ಗ್ರಾಪಂ ಹಾಗೂ ಜಿಪಂನ ಎಲ್ಲ ಅಧೀನ ಇಲಾಖೆಗಳ ಕಾರ್ಯಾಲಯದಲ್ಲಿ ಇಂದು ಸ್ವಚ್ಛ ಶನಿವಾರ ಕಾರ್ಯಕ್ರಮ ಆಯೋಜಿಸಿ ಕಾರ್ಯಾಲಯಗಳ ಆವರಣವನ್ನು ಸ್ವಚ್ಛಗೊಳಿಸುವ ಅಭಿಯಾನ ಮಾಡಲಾಗಿದೆ. ಜೊತೆಗೆ ದಾಖಲಾತಿಗಳ‌ ಸಮರ್ಪಕ ನಿರ್ವಹಣೆ, ನೋಟಿಸ್ ಬೋರ್ಡ್ ಸ್ವಚ್ಛತೆ, ನೀರಿನ ಟ್ಯಾಂಕ್ ನಿರ್ವಹಣೆ, ಸರ್ಕಾರಿ ವಾಹನಗಳ ಸ್ವಚ್ಛತೆ ಹೀಗೆ ವಿವಿಧ ರೀತಿಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಕಚೇರಿಗಳ ಸ್ವಚ್ಛತೆ ಹಾಗೂ ನಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಜಿಪಂ ಅಧೀನದ ಎಲ್ಲ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಲಯದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಾರ್ಯಾಲಯಗಳ ಆವರಣದಲ್ಲಿ ಪರಿಸರಸ್ನೇಹಿ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ ಸೇರಿ ಕಾರ್ಯಾಲಯದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.**********************************

Back to top button