*ಚನ್ನಮ್ಮ ಬದುಕು ಇತಿಹಾಸ ಅಲ್ಲ; ನವಪೀಳಿಗೆಗೆ ಸ್ವಾಭಿಮಾನದ ಪಾಠ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್*

*ಚನ್ನಮ್ಮನ ಕಿತ್ತೂರು ಉತ್ಸವ-2026: ಸಮಾರೋಪ ಸಮಾರಂಭ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ಕನ್ನಡ ನಾಡಿನ ದಿಟ್ಟ ಹೋರಾಟಗಾರ್ತಿ. ಚನ್ನಮ್ಮಳ ಧೈರ್ಯ ಇತಿಹಾಸ ಅಲ್ಲ; ಭವಿಷ್ಯದ ನವಪೀಳಿಗೆಗೆ ಸ್ವಾಭಿಮಾನದ ಪಾಠ. ಚನ್ನಮ್ಮಳ ಸಾಹಸ ನಮಗೆಲ್ಲ ಸ್ಫೂರ್ತಿ, ಅವರ ತ್ಯಾಗ ಅಜರಾಮರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಚನ್ನಮ್ಮನ ಕಿತ್ತೂರಿನ ಕಿತ್ತೂರು ಕೋಟೆಯ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ರವಿವಾರ (ಅ.25) ಜರುಗಿದ ಚನ್ನಮ್ಮನ ಕಿತ್ತೂರ ಉತ್ಸವ-2026ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಿತ್ತೂರು ವಿಜಯೋತ್ಸವ ದೀಪವು ಜನರ ಅಭಿವೃದ್ದಿಗೂ ಬೆಳಕಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಲಿದೆ. ಜನರ ಮನೆಬಾಗಿಲಿಗೆ ತೆರಳಿ ಅವರ ಅಹವಾಲುಗಳನ್ನು ಸ್ಥಳೀಯವಾಗಿ ಪರಿಹರಿಸಲು ಪ್ರಜಾಸೇವೆ ಇಲಾಖೆಯನ್ನು ಆರಂಭಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮಳ ಸ್ವಾಭಿಮಾನ, ಶೌರ್ಯ ಸಾಹಸದ ಪರಂಪರೆ ಈ ನೆಲದಲ್ಲಿ ಮುಂದುವರಿದಿದೆ.
*ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣದ ಭರವಸೆ*
ಕೋಟೆಯ ಆವರಣದಲ್ಲಿ ಇತಿಹಾಸದ ಮಹತ್ವ ಸಾರಲು ಅನಾವರಣಗೊಳಿಸಲು ದೃಶ್ಯಕಾವ್ಯ ರೂಪದ “ಫ್ರೀಡಂ ಪಾರ್ಕ್” ನಿರ್ಮಿಸಬೇಕು ಎಂಬ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಡಿಕೆಯನ್ನು ಶಾಸಕರು ಇಟ್ಟಿದ್ದು ಈ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು. ಈ ಬಗ್ಗೆ ತಕ್ಷಣವೇ ಸರಕಾರಿ ಆದೇಶವನ್ನೂ ಮಾಡಲಾಗುವುದು ಎಂದರು.
*ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ*
ವಾಯವ್ಯ ರಸ್ತೆ ಸಾರಿಗೆ ನಿಗಮದ ಹೆಸರನ್ನು ಮುಂಬರುವ ದಿನಗಳಲ್ಲಿ “ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ” ಎಂದು ನಾಮಕರಣ ಮಡಲಾಗುವುದು. ಕಿತ್ತೂರು ಭಾಗಕ್ಕೆ ಅನುಕೂಲವಾಗುವಂತೆ 520 ಕೋಟಿ ರೂಪಾಯಿ ವೆಚ್ಚದ ಚನ್ನವೃಷಭೇಂದ್ರ ನೀರಾವರಿ ಯೋಜನೆಗೂ ಅಗತ್ಯ ಅನುದಾನ ನೀಡಲಾಗುವುದು ಎಂದರು.
ಜನರು ಅಧಿಕಾರ ನೀಡಿದ್ದಾರೆ; ಅವರ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಿತ್ತೂರು ಚನ್ನಮ್ಮ ಎಲ್ಲರ ಬದುಕಿಗೆ ಮಾದರಿಯಾಗಲಿ ಎಂದು ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.
ಸಮಾರೋಪ ಭಾಷಣ ಮಾಡಿದ ಸಾಹಿತಿ ಪ್ರೊ. ಸಬಿತಾ ಬನ್ನಾಡಿ ಅವರು, ದಾಸ್ಯದ ನರಕಕ್ಕಿಂತ ಸ್ವಾತಂತ್ರ್ಯದ ಸ್ವರ್ಗವೆ ಲೇಸು ಎಂಬ ಚನ್ನಮ್ಮಾಜಿಯ ನಿಲುವನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಷ್ಟೋ ಹೋರಾಟಗಾರರನ್ನು ನಾವು ಮರೆತಿರಬಹುದು. ಆದರೆ ಕಿತ್ತೂರು ಚನ್ನಮ್ಮಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನ್ಯಾಯ, ನೀತಿ, ಜನಾನುರಾಗದಿಂದ ಗೆಲುವು ಖಂಡಿತವಾಗಿ ದೊರಕುತ್ತದೆ ಎಂಬುವುದಕ್ಕೆ ರಾಣಿ ಚನ್ನಮ್ಮ ಉದಾಹರಣೆ ಎಂಬುದನ್ನು ನಾವು ಇತಿಹಾಸದಿಂದ ತಿಳಿಯಬಹುದಾಗಿದೆ ಎಂದರು.
ಬ್ರಿಟಿಷರ ಕಾಲದಲ್ಲಿ ದೇಶದ ಎಲ್ಲ ರಾಜರು ಒಂದಾಗಿ ಹೊರಾಡಿದ್ದರೆ ಬ್ರಟಿಷರನ್ನು ಸದೆಬಡಿಯ ಬಹುದಾಗಿತ್ತು. ಕಿತ್ತೂರಿನ ಕೆಲ ಕುತಂತ್ರಿಗಳಿಂದಾಗಿ ಚನ್ನಮ್ಮ ಯುದ್ಧದಲ್ಲಿ ಮೋಸದಿಂದ ಯುದ್ಧದಲ್ಲಿ ಸೋಲಬೇಕಾಯಿತು. ಕುತಂತ್ರಿಗಳು ಬ್ರಿಟಿಷರಿಗೆ ಸಹಾಯ ಮಾಡದೆ ಇದ್ದಲ್ಲಿ ಕಿತ್ತೂರು ರಾಣಿ ಚನ್ನಮ್ಮಳನ್ನು ಬ್ರಿಟಿಷರು ಎಂದಿಗೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ.
ಜ್ಞಾನ ದ ಶಕ್ತಿ ಮುಂದೆ ಯಾವುದೆ ಶಕ್ತಿ ಇರುವುದಿಲ್ಲ. ಚನ್ನಮ್ಮಳಂತೆ ಪ್ರತಿ ಮಹಿಳೆಯನ್ನು ಬೆಳೆಸುವುದರ ಮೂಲಕ ನಾಡನ್ನು ಸಶಕ್ತ ನಾಡನ್ನಾಗಿಸಬಹುದಾಗಿದೆ ಎಂದು ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.
ಸಕ್ಕರೆ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕಿತ್ತೂರು ಚನ್ನಮ್ಮಳ ಹೆಸರು ಅಜರಾಮರವಾಗಿದೆ. ಅವರ ಸ್ವಾಭಿಮಾನ, ಅಭಿಮಾನಕ್ಕೆ ಗೌರವ ನೀಡುವ ಉದ್ದೇಶದೊಂದಿಗೆ ಸರಕಾರದ ವತಿಯಿಂದ ಪ್ರತಿ ವರ್ಷ ಅದ್ದೂರಿಯಾಗಿ ಅಚರಿಸಲಾಗುತ್ತಿದೆ ಎಂದರು.
ಶಾಸಕರಾದ ಬಾಬಸಾಹೇಬ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಿತ್ತೂರು ನಾಡಿನಲ್ಲಿ 202ನೇ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ನಾಡು ಸ್ವಾಭಿಮಾನದ ನಾಡಾಗಿದೆ. ಚನ್ನಮ್ಮಾಜಿ ಇತಿಹಾಸವನ್ನು ಹೊಸ ಪೀಳಿಗೆಗೆ ನೀಡುವ ಉದ್ದೇಶದೊಂದಿಗೆ ಅವರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಮನವಿ ಮಾಡಿದರು. ಚನ್ನಮ್ಮ ಪ್ರೀಡಂಪಾರ್ಕ ಸ್ಥಾಪನೆಯ ಹೊಸ ಯೋಜನೆಗೆ ಅನುಮೋದನೆ ನೀಡುವುದುರ ಮೂಲಕ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಚನ್ನಮ್ಮಳ ಇತಿಹಾಸ ಪಸರಿಸಲು ಅನುಕೂಲಕ ಮಾಡಿಕೊಡಲು ಕೋರಿದರು.
ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ. ಸ್ವಾಮೀಜಿ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು, ಕಾದರವಳ್ಳಿ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗಿಶ್ವರ ಮಹಾಸ್ವಾಮಿ, ಬೈಲೂರು ನಿಷ್ಕಲ ಮಂಟಪದ ನಿಜಗುಣ ತೋಂಟದಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಸರಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಶಾಸಕರುಗಳಾದ ಆಸೀಪ್(ರಾಜು) ಸೇಠ, ವಿಶ್ವಾಸ ವೈದ್ಯ, ಎನ್.ಎಚ್. ಕೋನರಡ್ಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿ. ಅಧ್ಯಕ್ಷ ಭರಮಣ್ಣ ಉಪ್ಪಾರ, ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಅಡಿವೇಶ ಇಟಗಿ, ಕಿತ್ತೂರ ಪಟ್ಟಣ ಪಂಚಾಯತ ಅಧ್ಯಕ್ಷರಾದ ಜೈಸಿದ್ರಾಮ್ ಮಾರಿಹಾಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಮುಖ್ಯಂಮತ್ರಿಗಳ ಆಪ್ತ ಕಾರ್ಯದರ್ಶಿ, ರಾಜೇಂದ್ರ ಕುಮಾರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್.ಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂತೋಷ ಹಾನಗಲ್ ಸ್ವಾಗತಿಸಿದರು.
*ರಕ್ತದಾನ- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು*
ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ನಮನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರದಲ್ಲಿ ಒಂದೇ ದಿನದಲ್ಲಿ 4634 ಯುನಿಟ್ ರಕ್ತ ಸಂಗ್ರಹಣೆ ಮಾಡುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು.
ಈ ಪ್ರಯುಕ್ತ ಇಂಡಿಯಾ ಬುಕ್ ಆಫ್ ರೆಕಾರ್ಡನ ಅಧಿಕಾರಿಗಳು ಕಿತ್ತೂರು ಉತ್ಸವ-2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮೂಲಕ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರಿಗೆ ಮುಖ್ಯ ಮಂತ್ರಿಗಳು ಅಭಿನಂದನೆ ಸಲ್ಲಿಸಿದರು.**********************************











