*ಕಿತ್ತೂರು ಸಾಂಸ್ಕೃತಿಕ ವೇದಿಕೆಯಲ್ಲಿ ವಚನ ಗಾಯನ ಕಂಪು: ಧಾರವಾಡದ ಪುಟ್ಟ ಗಾಯಕಿ ಆಧ್ಯಾ ಹಿರೇಮಠ ಅಭಿನಂದನೀಯ ಪ್ರದರ್ಶನ*

ಪ್ರಕೃತಿ ಬೆಳಗಾವಿ ಸುದ್ದಿ : ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ 202ನೇ ವಿಜಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಪವನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಾಗೂ ‘ಶ್ರೀ ವೀಣಾ ವಾಣಿ ಸಂಗೀತ ಪಾಠ ಶಾಲೆ’ಯ ಆಧ್ಯಾ ರಾಜಶೇಖರಯ್ಯ ಹಿರೇಮಠ ಅವರ ಸಂಗೀತ ಗೀತೆ ಗಾಯನ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.
ಅಷ್ಟೇ ಅಲ್ಲದೆ, ಶ್ರೀ ವೀಣಾ ವಾಣಿ ಸಂಗೀತ ಪಾಠ ಶಾಲೆಯ ಡಾ. ಎಸ್.ಎಸ್. ಮೇಡೆದಾರ ಅವರ ನಾಯಕತ್ವದ ತಂಡವು ಪ್ರಸ್ತುತಪಡಿಸಿದ ಸುಮಧುರ ವಚನ ಗೀತೆಗಳ ಗಾಯನ ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ವಿದ್ಯಾರ್ಥಿನಿ ಆಧ್ಯಾ ಹಾಗೂ ಡಾ. ಎಸ್.ಎಸ್. ಮೇಡೆದಾರ ತಂಡದ ಅದ್ಭುತ ವಚನ ಗಾಯನ ಮತ್ತು ಸಂಗೀತ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು, ಕಲಾತಂಡಕ್ಕೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಗಣನೀಯ ಕ್ಷಣದಲ್ಲಿ ಯಮಕನಮರಡಿಯ ಸಿಪಿಐ ಜಾವೇದ ಮುಷಾಪುರೆ, ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ ಸೇರಿದಂತೆ ಹಲವು ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದು, ಕಲಾವಿದರನ್ನು ಅಭಿನಂದಿಸಿದರು.*******************************






