ಪ್ರಕೃತಿ ಬೆಳಗಾವಿ

*ಚಿಂಗಳೆ ವಿರೋಧ : ಶಶಿಕಲಾ ಜೊಲ್ಲೆ ಕಣ್ಣೀರು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಂದು ನಡೆದ ನಿಪ್ಪಾಣಿ ಸಭೆ. ಹೌದು ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಜನರ ಸಂಕಷ್ಟ ನೋಡಿ ಕಣ್ಣೀರು ಹಾಕಿದ ಘಟನೆ ಇಂದು ನಡೆದಿದೆ.

ಪ್ರಧಾನಮಂತ್ರಿ ಘರಾಕುಲ ಯೋಜನೆಯಡಿ ಪಟ್ಟಣಕುಡಿ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಿರುವ ಜಿ ಪ್ಲಸ್ ಟು ಮನೆಗಳ ಹಂಚಿಕೆಗಾಗಿ ಬುಧವಾರ ನಡೆದ ಆಶ್ರಯ ಯೋಜನಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಕೊನೆಗೆ ಸಭೆಯನ್ನು ರದ್ದುಪಡಿಸಲಾಯಿತು.

ಸಭೆಯಲ್ಲಿ ಶಾಸಕಿಯಾದ ಶಶಿಕಲಾ ಜೊಲ್ಲೆ ಅವರು ಮೊದಲ ನಾಲ್ಕು ಹಂತದ ಹಣ ಪಾವತಿಸಿದ 600 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ವಿರೋಧ ವ್ಯಕ್ತಪಡಿಸಿ, 948 ಫಲಾನುಭವಿಗಳು ಹಣ ಪಾವತಿಸಿರುವುದರಿಂದ ಎಲ್ಲರಿಗೂ ಲಾಟರಿ ನಡೆಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ ಶಾಸಕಿಯವರು 800 ಮನೆಗಳು ಸಿದ್ಧವಾಗಿರುವುದರಿಂದ 800 ಮಂದಿಗೆ ಮನೆ ಹಂಚಿಕೆ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು. ಆದರೆ ಇದಕ್ಕೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ, ಪರಸ್ಪರ ವಿರುದ್ಧ ಘೋಷಣೆ ಮತ್ತು ಗದ್ದಲ ಉಂಟಾಯಿತು.

ಸಭೆ ಮೊಟಕುಗೊಳಿಸಿದ ನಂತರ ಶಾಸಕಿ ಶಶಿಕಲಾ ಜೊಲ್ಲೆ ಕಣ್ಣೀರು ಹಾಕಿದ ಘಟನೆ ನಡೆಯಿತು. 2008ರಿಂದ ನಿಪ್ಪಾಣಿ ಕ್ಷೇತ್ರದಲ್ಲಿ ಜನರ ಮಗಳಾಗಿ ರಾಜಕಾರಣ ಮಾಡುತ್ತಿದ್ದು, ಇದುವರೆಗೆ ಜಾತಿ-ಧರ್ಮದ ರಾಜಕಾರಣ ಮಾಡಿಲ್ಲ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮನೆ ಇಲ್ಲದ ಬಡ ಕುಟುಂಬಗಳಿಗಾಗಿ ಮಹತ್ವಾಕಾಂಕ್ಷಿ ವಸತಿ ಯೋಜನೆ ಜಾರಿಗೆ ತಂದಿದ್ದು, ಅದರಡಿ 600 ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಸಂತಸದ ಕ್ಷಣ ಸಮೀಪಿಸಿದ್ದರೂ, ವಿರೋಧಿಗಳು ಕಾರ್ಯಕ್ರಮಕ್ಕೆ ವಿಘ್ನ ಉಂಟುಮಾಡಿದರು ಎಂದು ದೂರಿದರು.***********************************

Back to top button