*ಸಹ್ಯಾದ್ರಿ ನಗರದಲ್ಲಿ 110 ಕೆವಿ ಸ್ಟೇಶನ್ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇಲ್ಲಿಯ ಸಹ್ಯಾದ್ರಿ ನಗರ ಬಡಾವಣೆಯಲ್ಲಿ 110 ಕೆವಿ ವಿದ್ಯುತ್ ಸ್ಟೇಶನ್ ನಿರ್ಮಾಣ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಸಂಜೆ ಭೂಮಿ ಪೂಜೆ ನೆರವೇರಿಸಿದರು.
ನಮ್ಮ ಕ್ಷೇತ್ರ ಶೇ.90ರಷ್ಟು ಭಾಗ ಹಳ್ಳಿ ಹಾಗೂ ಶೇ.10ರಷ್ಟು ಭಾಗ ನಗರದಿಂದ ಕೂಡಿದೆ. ನಗರ ಪ್ರದೇಶ ಹಳ್ಳಿಯಂತೆ, ಹಳ್ಳಿ ಪ್ರದೇಶ ಕುಗ್ರಾಮದಂತೆ ಇತ್ತು. ಮಹಾನಗರ ಪಾಲಿಕೆ ಅಡಿಯಲ್ಲಿ ಬಂದರೂ ಯಾರೂ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಸಾಸಕಿಯಾದ ನಂತರ ಜನರ ನಿರೀಕ್ಷೆಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು, ಅವರು ನಿರೀಕ್ಷೆ ಮಾಡುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡುತ್ತಿದ್ದೇನೆ.
ಸಹ್ಯಾದ್ರಿ ನಗರವೂ ಹನುಮಾನ್ ನಗರದಂತೆ ಆಗಬೇಕೆನ್ನುವ ಸಂಕಲ್ಪ ಇಟ್ಟುಕೊಂಡು, ಈಗ ಆ ಹಂತಕ್ಕೆ ಈ ಭಾಗ ಬೆಳೆಯುವಂತೆ ಮಾಡಿದ್ದೇನೆ. ಮುಂದಿನ 25 ವರ್ಷಗಳ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಭಾಗದಲ್ಲಿ 33 ಕೆವಿ ಸ್ಟೇಶನ್ ಇತ್ತು. ಆದರೂ ಮುಂದಿನ ವರ್ಷಗಳಲ್ಲಿ ಜನರಿಗೆ ಯಾವುದೇ ಸಮಸ್ಯೆ ಆಗಬಾರದೆನ್ನುವ ಉದ್ದೇಶದಿಂದ, ಜನರು ಕೇಳದಿದ್ದರೂ 110 ಕೆವಿ ವಿದ್ಯುತ್ ಸ್ಟೇಶನ್ ನಿರ್ಮಾಣ ಮಾಡಲಾಗುತ್ತಿದೆ. ಈವರೆಗಿನಂತೆ ಮುಂದೆಯೂ ನನ್ನ ಬೆನ್ನಿಗೆ ನಿಲ್ಲಬೇಕು ಎಂದು ಅವರು ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಭಾಗದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ. ಕೇವಲ ಭಾಷಣವಲ್ಲ, ನಿಜ ಅರ್ಥದಲ್ಲಿ ಈ ಪ್ರದೇಶದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಮುಂದಿನ 25 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಈ ಬಡಾವಣೆಯ ಅಭಿವೃದ್ಧಿ ಮಾಡುತ್ತಿದ್ದಾರೆ.
33 ಕೆವಿ ಸ್ಟೇಶನ್ ನಿಂದ 110 ಕೆವಿ ಸ್ಟೇಶನ್ ನಿರ್ಮಾಣವಾಗುತ್ತಿರುವುದರಿಂದ ಈ ಭಾಗದ ಜನರಿಗೆ ವಿದ್ಯುತ್ ಸಮಸ್ಯೆ ಆಗುವುದಿಲ್ಲ. ಜನರು ಕೇಳದಿದ್ದರೂ ಜನರ ಶ್ರೇಯೋಭಿವೃದ್ಧಿಗಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ಹೆಸ್ಕಾಂ ಸುಪರಿಂಡೆಂಟ್ ಎಂಜಿನಿಯರ್ ಕೃಷ್ಣಪ್ಪ, ಪಾಲಿಕೆ ಸದಸ್ಯ ಮುಸ್ತಾಕ್ ಮುಲ್ಲಾ, ಗುತ್ತಿಗೆದಾರ ದೇಸಾಯಿ, ರಾವ್ ಸಾಹೇಬ ಪಾಟೀಲ, ಪ್ರತಿಭಾ, ಹೊಳೆಪ್ಪ ಮಂಡೋಳಿ, ಶಿಂಧೆ, ರೊಟ್ಟಿ, ಮೋಹನ್ ಸುತಾರ, ಟೋಪಿ ಮೊದಲಾದವರು ಇದ್ದರು.************************************






