*ತಾಲೂಕಾ ಆಸ್ಪತ್ರೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೌಷಧಿಗಳ ಸಮರ್ಪಕ ಬಳಕೆ ಮಾಡಿ : ಜಿಪಂ ಸಿಇಒ ಶ್ರೀ ರಾಹುಲ್ ಶಿಂಧೆ*

*ಬೆಳಗಾವಿ ಜಿಲ್ಲಾ ಆರೋಗ್ಯ ಸಂಘದ(ಡಿ.ಹೆಚ್.ಎಸ್) ತ್ರೈಮಾಸಿಕ ಸಭೆ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಎ.ಬಿ.ಎ.ಆರ್.ಕೆ (ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ) ಕಾರ್ಯಕ್ರಮದಡಿ ಎಲ್ಲ ಸಂಸ್ಥೆಗಳಲ್ಲಿ ಅನುದಾನ ಲಭ್ಯವಿದ್ದು, ಅದರಂತೆ ಜಿಲ್ಲೆಯಲ್ಲಿ ಔಷಧಿಗಳ ಕೊರತೆ ಇರುವುದಿಲ್ಲ, ಖರೀದಿಸಿದ ಔಷಧಿಗಳನ್ನು ಇ-ಪೋರ್ಟಲ್ ಮೂಲಕ ಸರಿಯಾಗಿ ದಾಖಲೀಸಿ ಹಾಗೂ ಸಾರ್ವಜನಿಕರಿಗೆ ಔಷಧಿಯ ಕೊರತೆ ಆಗದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಭೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆಯ “ರಾಷ್ಟ್ರೀಯ ಆರೋಗ್ಯ ಅಭಿಯಾನ” ದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಆರೋಗ್ಯ ಸಂಘದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿನ ಮಾದರಿ ಪರೀಕ್ಷೆ : ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್. ಬಿ. ಎಸ್.ಕೆ ತಂಡ(ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ) ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿ 2 ತಿಂಗಳಿಗೊಮ್ಮೆ ತಮ್ಮ ತಾಲೂಕಿನಲ್ಲಿರುವ ಎಲ್ಲ ವಸತಿ ನಿಲಯಗಳಿಗೆ ಭೇಟಿ ನೀಡಿ, ಕುಡಿಯುವ ನೀರಿನ ಮಾದರಿ ಪರೀಕ್ಷೆ ಮತ್ತು ಮಕ್ಕಳ ಮಾನಸಿಕ ಆರೋಗ್ಯ ಕುರಿತು ತಪಾಸಣೆ ಮತ್ತು ಅರಿವು ಮೂಡಿಸಿ, ವಸತಿ ನೀಲಯಗಳಿಗೆ ಭೇಟಿ ನೀಡಿದ ಬಗ್ಗೆ ಸಂದರ್ಶಕರ ಪುಸ್ತಕ ಮತ್ತು ತಮ್ಮ ದೈನಂದಿನ ದಿನಚರಿ ಪುಸ್ತಕದಲ್ಲಿ ದಾಖಲಿಸುವುದು ಹಾಗೂ ಸದರಿ ವಿಷಯದ ಕುರಿತು ಜಿಲ್ಲಾ ಸಮೀಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಲು ಮಾನ್ಯರು ನಿರ್ದೇಶನ ನೀಡಿದರು.
ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ : ಪ್ರಸ್ತುತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೋರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು 3 ದಿನಗಳ ಒಳಗಾಗಿ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮಾನ್ಯರು ಸೂಚಿಸಿದರು.
ರಾಷ್ರ್ಟೀಯ ಅಂಧತ್ವ ನಿವಾರಣಾ ಕಾರ್ಯಕ್ರಮ : ರಾಷ್ರ್ಟೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ ರಾಮದುರ್ಗ, ಸವದತ್ತಿ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸೆಯ ಪ್ರಗತಿ ಕಡಿಮೆ ದಾಖಲಾಗಿದ್ದು, ಕಾರಣ ಖಾಸಗಿ ಸಂಘ-ಸಂಸ್ಥೆಗಳಿಗೆ ಕಡಿಮೆ ಗುರಿ ನಿಗಡಿಪಡಿಸಿರುವುದರಿಂದ ಮತ್ತು ಸದರಿ ತಾಲೂಕಿನಲ್ಲಿ ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸೆ ಮಾಡುವ ಆಸ್ಪತ್ರೆಗಳ ಇಲ್ಲದೇ ಇರುವುದರಿಂದ ಕಡಿಮೆ ಪ್ರಗತಿ ದಾಖಲಾತಿ ಆಗಿರುತ್ತದೆ ಎಂದು ಸಂಬಂಧಿಸಿದ ತಾಲೂಕಾ ಆರೋಗ್ಯ ಆಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರಕ್ತದಾನ ಶಿಬಿರ : ವಿಶೇಷ ಜಯಂತಿಗಳಂದು ಆರೋಗ್ಯ ಇಲಾಖೆಯಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಜಿಪಂ ಸಿಇಒ ಶ್ರೀ ರಾಹುಲ್ ಶಿಂಧೆ ರವರು ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಮುಂದುವರೆದು, ಸದರಿ ಸಭೆಯಲ್ಲಿ ಗೈರು ಹಾಜರಿದ್ದ ಕೆಲವೊಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮಾನ್ಯರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್.ಗಡೇದ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರಿಕಾಂತ ಸುಣಧೋಳಿ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕರಾದ ಡಾ. ಜಗದೀಶ ಗಾಣಗಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಸಂಜಯ ದೊಡಮನಿ, ಡಾ. ಎಸ್. ಎಸ್. ಸಾಯನ್ನವರ, ಡಾ. ವಿಶ್ವನಾಥ ಭೋವಿ, ಡಾ. ಚಾಂದನಿ ದೇವಡಿ, ಡಾ. ವಿವೇಕ ಹೊನ್ನಳ್ಳಿ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು.*******************************











