*ನರ್ಸ್ ಗಳೆಂದರೆ ಹೃದಯ ಶ್ರೀಮಂತರು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನರ್ಸಿಂಗ್ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಅದು ಒಂದು ಸೇವಾ ಧರ್ಮ ನರ್ಸ್ ಗಳು ಹೃದಯ ಶ್ರೀಮಂತರು ಅವರ ಒಂದು ನಗು, ಒಂದು ಧೈರ್ಯದ ಮಾತು, ಒಂದು ಮಮತೆಯ ಸ್ಪರ್ಶ ರೋಗಿಗೆ ಅರ್ಧ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಶನಿವಾರ ಬೆಳಗಾವಿಯ ಬಿಮ್ಸ್ (BIMS) ಕಟ್ಟಡದ ಹೊಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನರ್ಸಿಂಗ್ ಶಾಲೆಯ 109ನೇ ಬ್ಯಾಚ್ ವಿದ್ಯಾರ್ಥಿಗಳ “ಪ್ರೇರಣಾ ಜ್ಯೋತಿ – 2026” ದೀಪ ಬೆಳಗುವ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಳ್ಳೆಯ ವೃತ್ತಿಯನ್ನು ಆಯ್ದುಕೊಂಡಿದ್ದೀರಿ ಉತ್ತಮ ರೀತಿಯಲ್ಲಿ ಕಲಿತು, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ, ಒಬ್ಬ ಸಹೋದರಿಯಾಗಿ, ಒಬ್ಬ ತಾಯಿಯಾಗಿ, ಒಬ್ಬ ಮಗಳಾಗಿ ಜೀವನ ಪೂರ್ತಿ ಸೇವೆ ಮಾಡಿ. ನರ್ಸ್ ಗಳು ನೀಡುವ ಸೇವೆ ಕೇವಲ ಒಬ್ಬ ವ್ಯಕ್ತಿಗೆ ಅಲ್ಲ, ಒಂದು ಕುಟುಂಬಕ್ಕೆ, ಒಂದು ಸಮಾಜಕ್ಕೆ. ಒಬ್ಬ ವೈದ್ಯರು ರೋಗಿಗೆ ಚಿಕಿತ್ಸೆ ಕೊಡಬಹುದು. ಆದರೆ ಒಬ್ಬ ನರ್ಸ್ ರೋಗಿಯ ಮನಸ್ಸನ್ನು ಗುಣಪಡಿಸುತ್ತಾಳೆ. ವೈದ್ಯ ಕೆಲವೇ ನಿಮಿಷ ಬಂದು ಚಿಕಿತ್ಸೆ ನೀಡಿ ಹೋಗಬಹುದು.
ಆದರೆ ನರ್ಸ್ ರೋಗಿಯ ಜೊತೆಗೇ ಇದ್ದು ಧೈರ್ಯ ತುಂಬುತ್ತಾಳೆ, ಇಡೀ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡುತ್ತಾಳೆ. ಅವಳ ಮಾತೇ ರೋಗಿಯನ್ನು ಅರ್ಧ ಗುಣಪಡಿಸುತ್ತದೆ. ಅವರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು ಎಂದು ಅವರು ಹೇಳಿದರು.
ಇಂದು ನೀವು ತೆಗೆದುಕೊಳ್ಳುತ್ತಿರುವ ಪ್ರಮಾಣ ವಚನ ಕೇವಲ ಪದಗಳಲ್ಲ, ನಿಮ್ಮ ಜೀವನದ ಮೌಲ್ಯಗಳಾಗಬೇಕು. ನಿಮ್ಮ ಕೈಗಳಲ್ಲಿ ಜೀವಗಳಿವೆ, ನಿಮ್ಮ ಹೃದಯದಲ್ಲಿ ಕರುಣೆ ಇರಬೇಕು, ನಿಮ್ಮ ಮನಸ್ಸಿನಲ್ಲಿ ಶಿಸ್ತು ಇರಬೇಕು… ಈ ಮೂರು ಇದ್ದರೆ ನೀವು ಯಾವತ್ತೂ ಸೋಲುವುದಿಲ್ಲ. ನಿಮ್ಮ ಸೇವೆ ದೇವರ ಸೇವೆಗಿಂತ ಕಡಿಮೆಯಲ್ಲ, ನಿಮ್ಮ ಕೈಗಳು ಒಬ್ಬ ತಾಯಿಯ ಮಮತೆಯನ್ನು ಹೊಂದಿರಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಬೆಳಗಾವಿಯ ಈ ಮಹಾನ್ ಸಂಸ್ಥೆ ನೂರು ವರ್ಷಗಳಿಗಿಂತ ಹೆಚ್ಚು ಇತಿಹಾಸ ಹೊಂದಿದೆ. ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಮೊದಲ ಸ್ಥಾನಕ್ಕೇರಲಿ. ದೇಶದಲ್ಲಿ 38ನೇ ಸ್ಥಾನದಲ್ಲಿದೆ, ಮುಂದಿನ ವರ್ಷ 10ರೊಳಗಿನ ಸ್ಥಾನಕ್ಕೆ ಬರಲಿ. ನಿಮ್ಮನ್ನೆಲ್ಲ ನೋಡಿದಾಗ ಖಂಡಿತ ಸಾಧ್ಯ ಎನಿಸುತ್ತಿದೆ. ಕಾಲೇಜಿಗೆ ಅಗತ್ಯ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಕೀಯ ನಿರ್ದೇಶಕಿ ಡಾ. ಬಿ.ಎಲ್ ಸುಜಾತಾ ರಾಥೋಡ್, ಬಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ. ಅಶೋಕಕುಮಾರ್ ಶೆಟ್ಟಿ, ಮಡಿವಾಳಪ್ಪ ಎನ್, ಡಾ. ಸಂಜಯ ಪಿರಾಪೂರ್, ಶಿಲ್ಪಾ ವಾಲಿ, ಡಾ. ಉಮೇಶ್ ಕುಲಕರ್ಣಿ, ಡಾ. ಈರಣ್ಣ ಪಲ್ಲೇದ್, ಡಾ. ಜಗದೀಶ್ ಗಾಣಗಿ, ಉಷಾ ಭಂಡಾರಿ, ಡಾ.ಪ್ರಕಾಶ್ ಕೊಡ್ಲಿ ಸೇರಿದಂತೆ ಬಿಮ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.******************************






