ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಅಕ್ರಮವಾಗಿ ಮಟಕಾ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಕಾಕತಿ ಠಾಣೆ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ 2,200 ರು. ನಗದು ಹಾಗೂ ಮಟಕಾ ಆಟಕ್ಕೆ ಸಂಬಂಧಿಸಿದ ಓಸಿ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅ. 3ರಂದು ಕಾಕತಿ ಪೊಲೀಸ್ ಠಾಣೆಯ ಪಿಎಸ್‌ಐ ಮೃತ್ಯುಂಜಯ ಮಠದ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಣ್ಣೂರ ಗ್ರಾಮದ ಡಯಟ್ ಕಾಲೇಜು ಸಮೀಪದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಲಾಯಿತು.

ಈ ವೇಳೆ ಮಣ್ಣೂರಿನ ಜನತಾ ಕಾಲನಿ ನಿವಾಸಿ ಭಜರಂಗ ಅಶೋಕ ಕದಂ (40) ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಅಕ್ರಮವಾಗಿ ಮಟಕಾ ಜೂಜಾಟ ನಡೆಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು, 2,200 ರು. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ಬೆಳಗಾವಿ ನಿವಾಸಿ ಈಶ್ವರ ನಾಯಿಕ ಎಂಬಾತನಿಗೆ ನೀಡುವುದಾಗಿ ವಿಚಾರಣೆ ವೇಳೆ ಭಜರಂಗ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 224/2026ರ ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3)ರ ಪ್ರಕಾರ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೊದಲ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಎರಡನೇ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಯೂ ಪ್ರಗತಿಯಲ್ಲಿದೆ.

ಮಟಕಾ ಅಡ್ಡೆ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದ ಪಿಎಸ್‌ಐ ಮೃತ್ಯುಂಜಯ ಮಠದ ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.*********************************

Leave a Reply

Your email address will not be published. Required fields are marked *

Back to top button