ಪ್ರಕೃತಿ ಬೆಳಗಾವಿ

*ಉತ್ಸವದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಸಚಿವ ಸತೀಶ್ ಜಾರಕಿಹೊಳಿ*

ಕಿತ್ತೂರು ಉತ್ಸವ-2026…

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸೆ.28 : ಕಿತ್ತೂರ ಉತ್ಸವ ವಿಜೃಂಭಣೆಯಿಂದ ಆಚರಣೆಗೆ ರಚಿಸಲಾದ ವಿವಿಧ ಉಪ ಸಮಿತಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕರ‌ ಸಹಭಾಗಿತ್ವವು ಅಗತ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ‌ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಕಿತ್ತೂರಿನ ವೀರ ರಾಣಿ ಕಿತ್ತೂರು‌ ಚನ್ನಮ್ಮ ಸಭಾ ಭವನದಲ್ಲಿ ಸೋಮವಾರ(ಸೆ.28) ಜರುಗಿದ ಚನ್ನಮ್ಮ‌ ಉತ್ಸವ-2026 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ಸವದ ಅದ್ದೂರಿ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕಳೆದ ಉತ್ಸವದಲ್ಲಿನ ಲೋಪದೋಷ ಸರಿಪಡಿಸಿ ಅದ್ದೂರಿ ಉತ್ಸವ ಆಚರಿಸಲಾಗುವುದು ಎಂದರು.

ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಂದ ಉದ್ಘಾಟಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಸೂಕ್ತ ಸಾಧಕರನ್ನು ಗುರುತಿಸಲು ತಿಳಿಸಿದರು.

ಈ ಬಾರಿ ಉತ್ಸವದಲ್ಲಿ ವಿಶೇಷವಾಗಿ ಜಾನುವಾರು ಜಾತ್ರೆ ಆಯೋಜನೆಗೆ ನಿರ್ಧರಿಸಲಾಗಿದ್ದು, ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, ಉತ್ಸವದ ವೀರ ಜ್ಯೋತಿ, ಮೆರವಣಿಗೆಯನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಲು ಕ್ರಮ ವಹಿಸಬೇಕು.

ಕಿತ್ತೂರಿಗೆ ಇರುವಷ್ಟು ಆದ್ಯತೆ ಕಾಕತಿಗೂ ಇದ್ದು ಅಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಣಿ ಚನ್ನಮ್ಮಾಜಿಗೆ ಗೌರವ ಸಲ್ಲಿಸಲಾಗುವುದು. ಕಿತ್ತೂರಿನ ಇತಿಹಾಸದ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಕ್ರಮ ವಹಿಸಲಾಗುವುದು. ಮೂವತ್ತು ಕೋಟಿ ರೂ ಅನುದಾನದಲ್ಲಿ ಥೀಮ್ ಪಾರ್ಕ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಉತ್ಸವದ ಸಂದರ್ಭದಲ್ಲಿ ಮಕ್ಕಳಿಗಾಗಿ ವಿಜ್ಞಾನ ಮೇಳ ಆಯೋಜಿಸಲು ಪ್ರಯತ್ನಿಸಲಾಗುವುದು. ಕಿತ್ತೂರಿಗೆ ಸಂಪರ್ಕಿಸುವ ರಸ್ತೆಗಳಲ್ಲಿನ ಗಿಡ ಕಂಟಿಗಳ ತೆರವಿಗೆ ಸೂಚನೆ ನೀಡಿ, ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಸರಕಾರದಿಂದ ಆಯೋಜಿಸುವ‌ ಉತ್ಸವದ ಯಶಸ್ವಿಗಾಗಿ ಸಾರ್ವಜನಿಕರ ಸಹಭಾಗಿತ್ವವು ಅಗತ್ಯವಾಗಿದ್ದು ಮೂರು ದಿನಗಳ ಕಾಲ ಜರುಗುವ ವಿವಿಧ ಕಾರ್ಯಕ್ರಮ, ವಿಚಾರ ಸಂಕೀರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ರಾಜಗುರು ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಪಂಚಾಕ್ಷರಿ ಮಡಿವಾಳ ಸ್ವಾಮೀಜಿ ಹಾಗೂ ದೇಗುಳ ಹಳ್ಳಿ ಮಡಿವಾಳ ಮಠದ ಶ್ರೀ ವಿರೇಶ್ವರ ಸ್ವಾಮಿಜಿ ಅವರು, ಮೂರು ದಿನಗಳ ಕಿತ್ತೂರು ಉತ್ಸವದಲ್ಲಿ ರೈತರಿಗಾಗಿ ಒಂದು ವೇದಿಕೆಯನ್ನು ಕಲ್ಪಿಸಲು, ದಸರಾ ಅಂಬಾರಿ ಮಾದರಿಯಲ್ಲಿ ಚನ್ನಮ್ಮನ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಸಲು ಸಂಭ್ರಮದ ಉತ್ಸವದ ಆಚರಣೆಗೆ ಸಲಹೆಗಳನ್ನು ನೀಡಿದರು.

ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ ಇಂದಿನ‌ ಸಭೆಯಲ್ಲಿ ಸ್ವೀಕರಿಸಲಾದ ಸಲಹೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಕಳೆದ ವರ್ಷದ ಲೋಪಗಳನ್ನು ಸರಿಪಡಿಸಿ ಈ ಬಾರಿಯೂ ಅದ್ಧೂರಿಯಾಗಿ‌ ಉತ್ಸವ ಆಚರಣೆಗೆ ಕ್ರಮ‌ ವಹಿಸಲಾಗುವುದು ಎಂದರು.

ಈ ಬಾರಿ ಜಾನುವಾರು ಜಾತ್ರ ಹಾಗೂ ಫಲಪುಷ್ಪ ಅಲಂಕಾರಕ್ಕೆ ಒತ್ತು ನೀಡಲಾಗುವುದು. ವಿಚಾರ ಸಂಕೀರ್ಣದಲ್ಲಿ ಕಿತ್ತೂರು ಭಾಗದ ಶಾಲಾ ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಲು ಸೂಚಿಸಲಾಗಿದ್ದು. ಅದ್ದೂರಿ ಕಿತ್ತೂರು ಉತ್ಸವಕ್ಕೆ‌ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶಾಸಕರಾದ ಬಾಬಸಾಹೇಬ ಪಾಟೀಲ ಅವರು ಹೇಳಿದರು.

ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಅವರು ಮಾತನಾಡಿ, ಉತ್ಸವದ ಯಶಸ್ವಿಗಾಗಿ ವಿಜಯ ಜ್ಯೋತಿ ಸಮಿತಿ, ಶಿಷ್ಟಾಚಾರ, ಸ್ವಾಗತ ಸಮಿತಿ, ವಸತಿ ಸಮಿತಿ, ಊಟೋಪಚಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ, ವಸ್ತು ಪ್ರದರ್ಶನ ಸಮಿತಿ, ಸಾರಿಗೆ ಸಮಿತಿ, ಕಾಕತಿ ಉತ್ಸವ ಸಮಿತಿ, ವಿಚಾರ ಸಂಕೀರಣ ಸಮಿತಿ, ಪ್ರಚಾರ ಸಮಿತಿ, ದೀಪಾಲಂಕಾರ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಮಹಿಳಾ ಉತ್ಸವ ಸಮಿತಿ, ಜಾನುವಾರು ಜಾತ್ರೆ ಸಮಿತಿ ಒಟ್ಟು ಹದಿನೇಂಟು ಉಪ ಸಮಿತಿಗಳನ್ನು ರಚಿಸಲಾಗಿದೆ. ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಸಭೆಯಲ್ಲಿ ವಾ.ಕ.ರ.ಸಾರಿಗೆ ಸಂಸ್ಥೆ ಉಪಾಧ್ಯಕ್ಷರಾದ ಸುನೀಲ ಹನುಮಣ್ಣವರ, ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್.ಕೆ, ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂತೋಷ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

*ಸಾರ್ವಜನಿಕ ಸಲಹೆಗಳು*

ಉತ್ಸವದ ಸಿದ್ಧತೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಉಪನ್ಯಾಸಕರಿಗೆ ಗೌರವ ಧನ ವಿತರಣೆಯಲ್ಲಿ ವಿಳಂಬ ಮಾಡಬಾರದು, ಪೂರ್ವಭಾವಿ ಸಭೆಯಲ್ಲಿನ ಸಲಹೆಗಳನ್ನು ಅನುಷ್ಠಾನಗೊಳಿಸಬೇಕು. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಹೆಚ್ಚಿನ ಬಸ್ ವ್ಯವಸ್ಥೆ, ರಸ್ತೆ ಅಗಲೀಕರಣ ಕಾರ್ಯವಾಗಬೇಕು, ಟೆಂಡರ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿರಬೇಕು, ಉತ್ಸವದ ಸಂದರ್ಭದಲ್ಲಿ ಕಿತ್ತೂರು ಭಾಗದ ಶಾಲಾ ಕಾಲೇಜು ಮಕ್ಕಳು ಪಾಲ್ಗೊಳ್ಳಬೇಕು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೇ ನೀಡಬೇಕು. ಉತ್ಸವಕ್ಕೆ ಬಿಡುಗಡೆಯಾಗುವ ಅನುದಾನದ ಸಮರ್ಪಕ‌ ಬಳಕೆ ಹಾಗೂ ದುಂದು ವೆಚ್ಚಕ್ಕೆ ಕಡಿವಾಣ, ಅಮಟೂರು, ಬೆಳವಡಿ, ಸಂಗೋಳ್ಳಿ ಗ್ರಾಮಗಳ ಮರು ನಾಮಕರಣ, ಉತ್ಸವಕ್ಕೆ ಕೇಂದ್ರದಿಂದ ಅನುದಾನಕ್ಕೆ ಪತ್ರ, ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳ ಸಂರಕ್ಷಣೆ ಹಾಗೂ ಪ್ರಚಾರಗೊಳಿಸುವ ಕುರಿತು ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು.***********************************

Leave a Reply

Your email address will not be published. Required fields are marked *

Back to top button