*ಚಿಕ್ಕೋಡಿ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ , ಪರಿಶೀಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ಚಿಕ್ಕೋಡಿ ಸೆ.24 : ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರಪ್ಪ ಅವರು ಗುರುವಾರ(ಸೆ.24) ಚಿಕ್ಕೋಡಿಯ ಬಸ್ ನಿಲ್ದಾಣಕ್ಕೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಬಸ್ ನಿಲ್ದಾಣದಲ್ಲಿನ ವಿವಿಧ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಮಳಿಗೆಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದರು. ಬಸ ನಿಲ್ದಾಣದಲ್ಲಿನ ಉಪಾಹರ ಗ್ರಹದಲ್ಲಿನ ಆಹಾರ ತಯಾರಿಕಾ ಸಾಮಗ್ರಿಗಳ ದಾಸ್ತಾನು ಕೊಠಡಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿ ಉಪಹಾರ ಗೃಹದ ಸಿಬ್ಬಂದಿಗಳಿಗೆ ನೀಡಲಾಗುವ ವೇತನದ ಬಗ್ಗೆ ಮಾಹಿತಿ ಪಡೆದು ಸರಕಾರದ ಮಾರ್ಗಸೂಚಿಗಳನ್ವಯ ಕನಿಷ್ಠ ವೇತನ ನೀಡುವದರ ಜೊತೆಗೆ ಉಪಹಾರ ಗೃಹಕ್ಕೆ ಆಗಮಿಸುವ ಗ್ರಾಹಕರಿಗೆ ಗುಣಮಟ್ಟದ ಉಪಹಾರ ನೀಡುವುದರ ಜೊತೆಗೆ ಸ್ವಚ್ಚತೆಗೆ ಆದ್ಯತೇ ನೀಡುವಂತೆ ತಿಳಿಸಿದರು.
ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿ.ಸಿ. ಕ್ಯಾಮೆರಾಗಳು ಕಾರ್ಯನಿರ್ವಹಿಸದೆ ಇರುವ ಕುರಿತ ದೂರಿಗೆ ಸ್ಪಂಧಿಸಿ ಕೂಡಲೇ ಸಿ.ಸಿ.ಕ್ಯಾಮೆರಾಗಳ ದುರಸ್ತಿಗೆ ಕ್ರಮ ವಹಿಸಲು ತಿಳಿಸಿದರು. ನಿಲ್ದಾಣದಲ್ಲಿನ ಶೌಚಾಲಯಗಳ ಸ್ವಚ್ಚತೆ, ಬಳಕೆಗೆ ಶುಲ್ಕ ಆಕರಣೆಯಾಗುತ್ತಿರುವ ಕುರಿತು ದೂರು ಬಂದಲ್ಲಿ ಗುತ್ತಿಗೆ ರದ್ದು ಪಡಿಸಲು ತಿಳಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಿಳಿಸಿದರು.
ಬಸ ನಿಲ್ದಾಣದಲ್ಲಿನ ವಾಹನ ನಿಲುಗಡೆಗೆ ಆಕರಣೆ ಮಾಡಿ ನೀಡುವಂತಹ ಬಿಲ್ ಪ್ರತಿಯಲ್ಲಿ ವಾಹನಗಳ ಸಂಖ್ಯೆ ಇತರೆ ಮಾಹಿತಿ ನಮೂದಿಸದೆ ಅಕ್ರಮವೆಸಗುತ್ತಿರುವ ಕುರಿತು ಆಕ್ಷೇಪ ವ್ಯಕ್ತ ಪಡಿಸಿ ಕೂಡಲೆ ಸರಿಪಡಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಅರವಿಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಎಸ್.ಎಸ್.ಸಂಪಗಾವಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವು ಬಂಗಾರಪ್ಪನವರ, ತಹಶೀಲ್ದಾರ ಆರ್.ಆರ್.ಬುರ್ಲಿ, ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಉಪಸ್ಥಿತರಿದ್ದರು.*******************************






