*ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ ನಾಲ್ವರು ಸಜೀವ ದಹನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಹೃದಯವಿದ್ರಾವಕ ಅಗ್ನಿ ಅವಘಡ ಸಂಭವಿಸಿದೆ. ನಗರದ ಚವ್ಹಾಟಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನೆಯಲ್ಲಿ ಫ್ರಿಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಮನೆಗೆ ಬೆಂಕಿ ಆವರಿಸಿದೆ ಎನ್ನಲಾಗಿದೆ. ಮನೆಯಲ್ಲಿದ್ದವರು ಬೆಂಕಿಯಿಂದ ಹೊರಬರಲಾಗದೆ ಸಿಲುಕಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಗಜಾನನ ದಮೋನೆ (65), ರೋಷನ ದಮೋನೆ (21), ಶಾರಧಾ ದಮೋನೆ (45) ಹಾಗೂ ಭಾರತಿ ರದಮೋನೆ (50) ಎಂದು ಗುರುತಿಸಲಾಗಿದೆ.
ಅವಘಡದಲ್ಲಿ ಪ್ರಿಯಾ ದಮೋನೆ (28) ಹಾಗೂ ಗಂಗಾ ದಮೋನೆ (25) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಗಣೇಶ ಚತುರ್ಥಿಯ ದಿನವೇ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ.
ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.***********************************






