*ಬೆಳಗಾವಿ ನಗರದ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ ನಿಕ್ಕಂ ಅಧಿಕಾರ ಸ್ವೀಕಾರ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ 2012ರ ಐಪಿಎಸ್ ಬ್ಯಾಚ್ ಅಧಿಕಾರಿ ಪ್ರಕಾಶ ನಿಕ್ಕಂ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ನಿಕಟಪೂರ್ವ ಕಮಿಷನರ್ ಭೂಷಣ ಬೊರಸೆ ಅವರಿಗೆ ಇಲಾಖೆಯ ವತಿಯಿಂದ ಅದ್ದೂರಿ ಬೀಳ್ಕೊಡುಗೆ ನೀಡಲಾಯಿತು.
ಕಮಿಷನರ್ ಕಚೇರಿಗೆ ಆಗಮಿಸಿದ ನೂತನ ಆಯುಕ್ತರಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸಿ ಸ್ವಾಗತಿಸಲಾಯಿತು. ನಂತರ ಕೊಠಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಕಮಿಷನರ್ ಭೂಷಣ ಬೊರಸೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಪುಷ್ಪಗುಚ್ಛ ನೀಡಿ ಬರಮಾಡಿಕೊಂಡು, ಅಧಿಕಾರ ಹಸ್ತಾಂತರಿಸಿದರು.
ಖಡಕ್ ಎಚ್ಚರಿಕೆ:
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ ನಿಕ್ಕಂ, “2013-14ರಲ್ಲಿ ನಾನು ಇಲ್ಲೇ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೆ. ಆಗ ಜಿಲ್ಲಾ ಪೊಲೀಸ್ ವ್ಯವಸ್ಥೆಯಿತ್ತು. ಈಗ ಕಮಿಷನರೇಟ್ ಆಗಿ ಬದಲಾಗಿದೆ. ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಸೈಬರ್ ಕ್ರೈಮ್ ತಡೆಗೆ ಗಂಭೀರ ಆದ್ಯತೆ ನೀಡಲಾಗುವುದು. ಯಾವುದೇ ಕಾರಣಕ್ಕೂ ರೌಡಿಗಳು ನಗರದಲ್ಲಿ ರೌಡಿಸಂ ಮಾಡಬಾರದು, ಸಾರ್ವಜನಿಕರ ಶಾಂತಿಗೆ ಭಂಗ ತಂದರೆ ದಾಕ್ಷಿಣ್ಯವಿಲ್ಲದೆ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ವಿಶಿಷ್ಟ ರೀತಿಯಲ್ಲಿ ಮೆರವಣಿಗೆ:
ಕಾರ್ಯವೈಖರಿಯಿಂದ ‘ಜನಸ್ನೇಹಿ’ ಎನಿಸಿಕೊಂಡಿದ್ದ ಭೂಷಣ ಬೊರಸೆ ಅವರಿಗೆ ಇಲಾಖೆಯ ಸಿಬ್ಬಂದಿ ಪುಷ್ಪವೃಷ್ಟಿ ಗೈದು ಗೌರವಿಸಿದರು. ಬಳಿಕ ಅಲಂಕೃತ ತೆರೆದ ವಾಹನದಲ್ಲಿ ಅವರನ್ನು ನೂತನ ಕಮಿಷನರ್ ಪ್ರಕಾಶ ನಿಕ್ಕಂ, ಎಸ್ಪಿ ಕೆ. ರಾಮರಾಜನ್, ಡಿಸಿಪಿಗಳಾದ ನಾರಾಯಣ ಬರಮನಿ, ನಿರಂಜನ್ ರಾಜೆ ಅರಸ್, ವೈ.ಕೆ. ಕಾಳಪ್ಪನವರ ಹಾಗೂ ಎಸಿಪಿ, ಸಿಪಿಐ, ಪಿಎಸ್‌ಐ ಹಂತದ ಅಧಿಕಾರಿಗಳು ತಾವೇ ವಾಹನವನ್ನು ಎಳೆಯುವ ಮೂಲಕ ಗೌರವಪೂರ್ವಕವಾಗಿ ಬೀಳ್ಕೊಟ್ಟರು.
ನೂತನ ಆಯುಕ್ತರ ಕಿರು ಪರಿಚಯ:
ಮಹಾರಾಷ್ಟ್ರದ ನಾಸಿಕ್ ಮೂಲದ ಪ್ರಕಾಶ ನಿಕ್ಕಂ ಅವರು 2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಳಗಾವಿಯಲ್ಲಿ ಪ್ರೊಬೆಷನರಿಯಾಗಿ ವೃತ್ತಿಜೀವನ ಆರಂಭಿಸಿದ್ದ ಇವರು, ಬಳಿಕ ವಿಜಯಪುರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಮತ್ತು ಬ್ಯೂರೋ ಆಫ್ ಸಿವಿಲ್ ಎವಿಯೇಷನ್ ಸೆಕ್ಯೂರಿಟಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.*********************************






