ಪ್ರಕೃತಿ ಬೆಳಗಾವಿ

*ಕಾಟಗಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ: ಶಿಕ್ಷಣ, ಸಂಘಟನೆ ಹಾಗೂ ಹಕ್ಕುಗಳಿಗಾಗಿ ಶ್ರಮಿಸಲು ಕರೆ*

ಪ್ರಕೃತಿ ಬೆಳಗಾವಿ ಸುದ್ದಿ : ಖಾನಾಪುರ : ತಾಲೂಕಿನ ಕಾಟಗಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳ ದೇವಸ್ಥಾನ ಕಟ್ಟಡ ಕಾಮಗಾರಿಗೆ ಗ್ರಾಮದ ಮುಖಂಡರ ನೇತೃತ್ವದಲ್ಲಿ ವಿಜೃಂಭಣೆಯಿಂದ ಭೂಮಿ ಗುದ್ದಲಿ ಪೂಜೆ ನೆರವೇರಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಮೂರ್ತಿಗೆ ಪೂಜೆ ಸಲ್ಲಿಸಿದ ದೇವಸ್ಥಾನದ ಪೂಜಾರಿಗಳಾದ ಪ್ರಕಾಶ್ ಗುರವ್ ಹಾಗೂ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಮಹೇಶ್ ಎಸ್. ಶೀಗಿಹಳ್ಳಿ ಅವರು ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಯುವ ನಾಯಕ ಮಹೇಶ್ ಶೀಗಿಹಳ್ಳಿ, ಗ್ರಾಮದ ಯುವಜನತೆಯಲ್ಲಿ ಜಾಗೃತಿ ಮೂಡಿಸುತ್ತಾ, “ಹಿರಿಯರ ಮಾರ್ಗದರ್ಶನದಂತೆ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಸಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು” ಎಂದು ಕರೆ ನೀಡಿದರು. ಜೊತೆಗೆ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಅಕ್ಷರ ಜ್ಞಾನ ಮತ್ತು ಅವರ ವಿಚಾರಧಾರೆಯ ಮಹತ್ವದ ಕುರಿತು ಬೆಳಕು ಚೆಲ್ಲಿದರು.

ಮುಂದುವರಿದು ಮಾತನಾಡುತ್ತಾ, ಗ್ರಾಮದ ಕನ್ನಡ ಶಾಲೆಯ ಸಬಲೀಕರಣ, ಸರ್ಕಾರದಿಂದ ದೊರೆಯುವ ವಿವಿಧ ಯೋಜನಾ ಸೌಲಭ್ಯಗಳನ್ನು ಗ್ರಾಮಕ್ಕೆ ತಲುಪಿಸುವ ಮಾರ್ಗಗಳು ಹಾಗೂ ಗ್ರಾಮದ ಮೂಲಭೂತ ಹಕ್ಕುಗಳಿಗಾಗಿ ಜನರೆಲ್ಲರೂ ಒಂದಾಗಿ ಹೋರಾಡುವ ಅಗತ್ಯತೆಯ ಬಗ್ಗೆ ಕೂಲಂಕುಶವಾಗಿ ಜನರಿಗೆ ತಿಳಿಸಿಕೊಟ್ಟರು. ಇದೇ ವೇಳೆ ಗ್ರಾಮದ ಗುರು-ಹಿರಿಯರು ಮಹೇಶ್ ಶೀಗಿಹಳ್ಳಿ ಅವರನ್ನು ಪ್ರೀತ್ಯಾದರಗಳಿಂದ ಸನ್ಮಾನಿಸಿದರು.

​ಈ ಶುಭ ಸಮಾರಂಭದಲ್ಲಿ ಬೆಳಗಾವಿ ತಾಲೂಕು ಅಧ್ಯಕ್ಷ ಮಂಗೇಶ್ ಚನ್ನಿಕುಪ್ಪಿ, ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಆಕಾಶ್ ನಾಯಕ್, ಅಭಿ ಶೀಗಿಹಳ್ಳಿ, ಯಲ್ಲಪ್ಪ ನಾಯಕ್, ಕಾಶಪ್ಪ ನಾಯಕ್ ಸೇರಿದಂತೆ ಗ್ರಾಮದ ಪ್ರಮುಖರಾದ ನಾಗಪ್ಪ ನಾಯಕ, ದಿಗಂಬರ್ ನಾಯಕ್, ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಬರುಕರ, ಸದಸ್ಯ ಮನೋಹರ ಸುಳೆಬಾವಿಕರ, ಗ್ರಾಮ ಮುಖಂಡರಾದ ಸತ್ಫಲ ಸಂಜೀಮನಿ, ಕರೆಪ್ಪ ಬಾಳನ್ನವರ, ಲಗಮಣ್ಣ ನಾಯಕ್, ಕಾಶೀನಾಥ್ ನಾಯಕ್, ಭೀಮಾ ನಾಯಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.*********************************

Leave a Reply

Your email address will not be published. Required fields are marked *

Back to top button